ಚೆಟ್ಟಳ್ಳಿ, ಡಿ. 10: ಮಡಿಕೇರಿ ತಾಲೂಕಿನ ಕಡಗದಾಳುವಿನ ಕುರುಳಿ ಅಂಬಲದಲ್ಲಿ ಪುತ್ತರಿ ಕೋಲಾಟ್ ನಡೆಯಿತು.ಕೊಡಗಿನ ಸಾಂಪ್ರದಾಯಿಕ ಪುತ್ತರಿ ಹಬ್ಬಕ್ಕೆ 2 ದಿನ ಮುಂಚಿತವಾಗಿ ಊರಿನವರು ರಾತ್ರಿ 8 ಗಂಟೆಗೆ ಈಡು ತೆಗೆದರು. ಪುತ್ತರಿ ಹಬ್ಬದಂದು ಮಂದ್ನಲ್ಲಿ ದೇವ ನೆಲೆಗೆ ಕದಿರು ಕಟ್ಟಿ ಎರಡು ದಿನಗಳ ನಂತರ ಸಂಜೆ 5 ಗಂಟೆಗೆ ಊರಿನವರ ಸಮ್ಮುಖದಲ್ಲಿ ಮಂದ್ತೊರ್ಪ ಕಾರ್ಯಕ್ರಮ ನೆರವೇರಿತು. ಮೂರನೆಯ ದಿನ ನಾಡುಕೋಲ್, ಅಂದು ಪಾಂಡಿರ ಕುಟುಂಬದ ದೇಶತಕ್ಕರು, ಪೊನ್ನಚೆಟ್ಟಿರ ಕುಟುಂಬದ ನಾಲ್ಕುನಾಡು ತಕ್ಕರು, ಕೊರವಂಡ ಕುಟುಂಬದ ಊರುತಕ್ಕರು, ಒಟ್ಟು 7 ನಾಡಿನ ತಕ್ಕರು, ಕೋಲಾಟ್ ಆಚರಿಸಿದರು. ಮಧ್ಯಾಹ್ನ 12 ಗಂಟೆಗೆ ಊರಿನವರೆಲ್ಲ ಸೇರಿ ಊರುತಕ್ಕ ಕೊರವಂಡ ಕುಟುಂಬದ ಐನ್ಮನೆಗೆ ತೆರಳಿ ಮಧ್ಯಾಹ್ನದ ಉಟೋಪಚಾರ ಮುಗಿಸಿ ಸಾಂಪ್ರದಾಯದ ವಾಲಗ ತಳಿಯಕ್ಕಿ ಬೊಳ್ಚ, ದುಡಿಕೊಟ್ಟ್ ಹಾಡಿನೊಂದಿಗೆ ಮಂದ್ಗೆ ಕರೆತರಲಾಯಿತು. ದೇಶತಕ್ಕರನ್ನು ನಾಡ್ತಕ್ಕರನ್ನು ಹುತ್ತಿರ ಕೋಲಾಟದೊಂದಿಗೆ ಸತ್ಕರಿಸಲಾಯಿತು. ವಾಲಗಕ್ಕೆ ಪುರುಷರು, ಮಹಿಳೆ, ಮಕ್ಕಳೆಲ್ಲ ಹೆಜ್ಜೆ ಹಾಕಿದರು. ಸಂಜೆ 7 ಗಂಟೆಗೆ ವಿಷ್ಣು ಮೂರ್ತಿ ಪೂಜೆ ಸಲ್ಲಿಸಿ ಕೋಲನ್ನು ಮಂದ್ನ ದೇವನೆಲೆಯಲ್ಲಿ ಒಪ್ಪಿಸಿದರು.