ಪೊನ್ನಂಪೇಟೆ, ಡಿ. 9: ಮುಸ್ಲಿಮರು ಅಲ್ಪಸಂಖ್ಯಾತರಾಗಿದ್ದರೂ ಕೊಡಗಿನ ಕಾಂಗ್ರೆಸ್‍ನಲ್ಲಿ ಬಹುಸಂಖ್ಯಾತರಾಗಿದ್ದಾರೆ. ಕಾಂಗ್ರೆಸ್‍ನಿಂದ ಜಿಲ್ಲೆಯ ಅಲ್ಪಸಂಖ್ಯಾತರಿಗೆ ಇದುವರೆಗೂ ಸೂಕ್ತ ಸ್ಥಾನಮಾನ ದೊರೆತಿಲ್ಲ. ಕೊಡಗಿನ ಅಲ್ಪಸಂಖ್ಯಾತರಿಗೆ ಕಾಂಗ್ರೆಸಿನಿಂದ ನ್ಯಾಯ ಒದಗಿಸಲು ಪಕ್ಷದ ಹೈಕಮಾಂಡ್ ಗಂಭೀರ ಪ್ರಯತ್ನಗಳನ್ನು ಮಾಡಬೇಕು ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ) ಆಗ್ರಹಿಸಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಕೆ.ಎಂ.ಎ ಪರವಾಗಿ ಮಾತನಾಡಿದ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಹಾಗೂ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‍ನ ಉಪಾಧ್ಯಕ್ಷ ಆಲೀರ ಎ. ಅಹಮದ್ ಹಾಜಿ ಅವರು, ಮುಸಲ್ಮಾನರು ಸೇರಿದಂತೆ ವಿವಿಧ ಜನಸಮುದಾಯ ಗಳನ್ನೊಳಗೊಂಡ ಅಲ್ಪಸಂಖ್ಯಾತರ ಪೈಕಿ ಬಹುಪಾಲು ಜನರು ಕಾಂಗ್ರೆಸ್‍ನ ಪಾರಂಪಾರಿಕ ಮತದಾರರಾಗಿದ್ದಾರೆ. ಕೊಡಗಿನ ಅಲ್ಪಸಂಖ್ಯಾತರ ರಾಜಕೀಯ ಉನ್ನತಿಯ ಬಗ್ಗೆ ಗಮನ ಹರಿಸಬೇಕಾಗಿರುವದು ಇಂದಿನ ಪ್ರಮುಖ ಅನಿವಾರ್ಯತೆಯಾಗಿದೆ. ಕಾಂಗ್ರೆಸ್ ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಹೇಳಿದರು.

ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಯಾವದೇ ಜನಸಮುದಾಯದ ಸಾಮಾಜಿಕ ಅಭಿವೃದ್ದಿಗೆ ರಾಜಕೀಯ ಸ್ಥಾನಮಾನ ಅಗತ್ಯವಾಗಿದೆ. ಅಲ್ಲದೆ ಸಮುದಾಯದ ಸಾಮಾಜಿಕ ಸಂಘಟನೆಗಳಿಗೆ ರಾಜಕೀಯ ಸ್ಥಾನಮಾನಗಳನ್ನು ಕೇಳುವ ನೈತಿಕತೆಯೂ ಇದೆ. ಈ ಹಿನ್ನೆಲೆಯಲ್ಲಿ ಕೊಡವ ಮುಸ್ಲಿಮರ ಪ್ರಾತಿನಿಧಿಕ ಸಾಮಾಜಿಕ ಸಂಘಟಣೆಯಾಗಿರುವ ಕೆ.ಎಂ.ಎ. ರಾಜಕೀಯ ಸ್ಥಾನಮಾನದ ಬೇಡಿಕೆಯನ್ನು ಮುಂದಿಡುತ್ತಿದೆ ಎಂದು ಆಲೀರ ಎ.ಅಹಮ್ಮದ್ ಹಾಜಿ ಅಭಿಪ್ರಾಯಪಟ್ಟರು.

ಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಹಳ್ಳಿಗಟ್ಟಿನ ಚಿಮ್ಮಿಚ್ಚಿರ ಕೆ. ಇಬ್ರಾಹಿಂ (ಉಮ್ಣಿ), ತಾ.ಪಂ. ಮಾಜಿ ಸದಸ್ಯ ಎಂ.ವೈ.ಆಲಿ, ಕೊಟ್ಟಮುಡಿಯ ಹೆಚ್.ಎ. ಹಂಸ, ಬೇಟೋಳಿಯ ಮಂಡೇಂಡ ಎ. ಮೊಯ್ದು, ಚಾಮಿಯಾಲದ ಪುದಿಯತಂಡ ಹೆಚ್. ಶಂಷುದ್ದೀನ್ ಅವರು ಉಪಸ್ಥಿತರಿದ್ದರು.