ಸೋಮವಾರಪೇಟೆ, ಡಿ. 8: ಕೊಡಗು ಜಿಲ್ಲೆಯಲ್ಲಿ ಅನೇಕ ದಶಕಗಳಿಂದ ನೆಲೆಸಿರುವ ಭೋವಿ ಜನಾಂಗಕ್ಕೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ಲಭಿಸುತ್ತಿಲ್ಲ. ದಾಖಲೆಗಳ ಕೊರತೆಯಿಂದಾಗಿ ಸಮಸ್ಯೆ ಉದ್ಭವಿಸಿದ್ದು, ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕೆಂದು ಅಖಿಲ ಕರ್ನಾಟಕ ಭೋವಿ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಸುಜಿತ್ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ 2 ಸಾವಿರಕ್ಕೂ ಅಧಿಕ ಭೋವಿ ಜನಾಂಗದ ಕುಟುಂಬಗಳಿದ್ದು, ಶೇ. 80 ರಷ್ಟು ಮಂದಿಗೆ ಇಂದಿಗೂ ಜಾತಿ ದೃಡೀಕರಣ ಪತ್ರವಿಲ್ಲ. ಇದರಿಂದಾಗಿ ಸರ್ಕಾರದ ಯಾವದೇ ಸೌಲಭ್ಯಗಳು ಲಭಿಸುತ್ತಿಲ್ಲ. ಜನಾಂಗದಲ್ಲಿ ಹೆಚ್ಚಿನವರು ಅವಿದ್ಯಾವಂತರಾಗಿದ್ದು, ಜಾತಿ ದೃಢೀಕರಣ ಪತ್ರಕ್ಕೆ ಬೇರೆ ಬೇರೆ ದಾಖಲೆಗಳನ್ನು ಕೇಳಿ ವಾಪಸ್ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾಲೀಕರ ಕಲ್ಲುಕೋರೆಗಳಲ್ಲಿ ಕಲ್ಲುಗಳನ್ನು ಒಡೆದುಕೊಂಡು, ಕೂಲಿ ಕೆಲಸ ಮಾಡಿಕೊಂಡು ಕನಿಷ್ಟ ಸೌಲಭ್ಯಗಳಿಂದಲೂ ವಂಚಿತವಾಗಿ ಭೋವಿ ಜನಾಂಗ ಜೀವನ ಸಾಗಿಸುತ್ತಿದೆ. ರಾಜ್ಯದಲ್ಲಿ ಭೋವಿ ನಿಗಮ ಅಸ್ತಿತ್ವಕ್ಕೆ ಬಂದು ಸರ್ಕಾರ ಅನುದಾನ ನೀಡುತ್ತಿದ್ದರೂ ಜಾತಿ ದೃಢೀಕರಣ ಪತ್ರದ ಕೊರತೆಯಿಂದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ ವರ್ಗಕ್ಕೆ ಸೇರುವ ಭೋವಿ ಜನಾಂಗಕ್ಕೆ ಜಾತಿ ದೃಢೀಕರಣ ಪತ್ರ ನೀಡಲು ಸಂಬಂಧಪಟ್ಟ ತಾಲೂಕು ತಹಶೀಲ್ದಾರ್‍ಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಬೇಕು. ವಿಶೇಷ ಆದ್ಯತೆಯ ಮೇರೆ ಜನಾಂಗಕ್ಕೆ ಸೌಲಭ್ಯಗಳನ್ನು ದೊರಕಿಸಿಕೊಡಬೇಕು. ತಪ್ಪಿದಲ್ಲಿ ಜಿಲ್ಲೆಯ ಭೋವಿ ಸಮುದಾಯದಿಂದ ಮೂರೂ ತಾಲೂಕು ಕಚೇರಿ ಎದುರು ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಸುಜಿತ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.