ಶ್ರೀಮಂಗಲ, ಡಿ. 8: ಪೊನ್ನಂಪೇಟೆ ತಾಲೂಕು ಪುನರಚನೆಗೆ ಆಗ್ರಹಿಸಿ ಪೊನ್ನಂಪೇಟೆ ಗಾಂಧಿ ಪ್ರತಿಮೆ ಎದುರು ನಡೆಯುತ್ತಿರುವ 38ನೇ ದಿನದ ಪ್ರತಿಭಟನೆಯಲ್ಲಿ ಬಲ್ಯಮೂಂಡೂರು, ಕೋಟೂರು, ನಡಿಕೇರಿ, ಚಿಕ್ಕಮೂಂಡೂರು, ಮುಗುಟಗೇರಿ, ತೂಚಮಕೇರಿ ಗ್ರಾಮಸ್ಥರು ಅಲ್ಲದೆ, ಕುಟ್ಟ ಕೊಡವ ಸಮಾಜ, ಕುಟ್ಟದ ಶ್ರೀ ಬೈರವ ಭದ್ರಕಾಶಿ ಮತ್ತು ಅಯ್ಯಪ್ಪ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.

ಇಲ್ಲಿನ ಕಾನೂರು ಜಂಕ್ಷನ್‍ನಿಂದ ಬಲ್ಯಮೂಂಡೂರು, ಕೋಟೂರು, ನಡಿಕೇರಿ, ಚಿಕ್ಕಮೂಂಡೂರು, ಮುಗುಟಗೇರಿ, ತೂಚಮಕೇರಿ ಗ್ರಾಮಸ್ಥರು ಪೊನ್ನಂಪೇಟೆ ಮುಖ್ಯ ಬೀದಿಯ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ ಗಾಂಧಿ ಪ್ರತಿಮೆ ಸಮೀಪ 30 ನಿಮಿಷಗಳ ಕಾಲ ಮಾನವ ಸರಪಳಿ ರಚನೆ ಮಾಡಿ ಘೋಷಣೆ ಕೂಗಿದರು. ಈ ಸಂದರ್ಭ ಕುಟ್ಟ ಕೊಡವ ಸಮಾಜದ ಉಪಾಧ್ಯಕ್ಷ ಮಚ್ಚಮಾಡ ಸುಬ್ರಮಣಿ ಮಾತನಾಡಿ, ತಾಲೂಕು ರಚನೆಯಾಗುವವರೆಗೆ ಹೋರಾಟ ಮುಂದುವರೆಸಲು ಕರೆ ನೀಡಿದರು.

ತಾಲೂಕು ಅಕ್ರಮ ಸಕ್ರಮ ಸಮಿತಿಯ ಸದಸ್ಯ ಹೆಚ್.ವೈ. ರಾಮಕೃಷ್ಣ ಮಾತನಾಡಿ, ಸರ್ಕಾರ ತಾಲೂಕು ರಚನೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕುಟ್ಟ ಕೊಡವ ಸಮಾಜದ ನಿರ್ದೇಶಕ ತೀತಿರ ಮಂದಣ್ಣ ಮಾತನಾಡಿ ಕಳೆದ 38 ದಿನಗಳಿಂದ ಜನರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ ಸ್ಪಂದಿಸಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭ ಜಿ.ಪಂ ಮಾಜಿ ಅಧ್ಯಕ್ಷೆ ಶರೀನ್ ಸುಬ್ಬಯ್ಯ, ತಾಲೂಕು ಹೋರಾಟ ಸಮಿತಿಯ ಸಂಚಾಲಕ ಎಂ.ಎಂ.ರವೀಂದ್ರ, ಜೆಡಿಎಸ್ ಮುಖಂಡ ಕೆ.ಆರ್. ಸುರೇಶ್, ಆಲೀರ ಸಾದಲಿ, ಚೀರಂಡ ಕಂದಾ ಸುಬ್ಬಯ್ಯ, ಕೋಟೆರ ಕಿಶನ್, ಅಂತರರಾಷ್ಟ್ರೀಯ ಹಿರಿಯ ಓಟಗಾರ ಪೆಮ್ಮಂಡ ಅಪ್ಪಯ್ಯ, ಪೊನ್ನಂಪೇಟೆ ನಾಗರಿಕ ವೇದಿಕೆಯ ಸದಸ್ಯರು ಹಾಗೂ ನೂರಾರು ನಾಗರಿಕರು ಪಾಲ್ಗೊಂಡಿದ್ದರು.