ಮಡಿಕೇರಿ, ಡಿ. 8: ಜಿಲ್ಲೆಯ ಪವಿತ್ರ ಕ್ಷೇತ್ರ ಶ್ರೀ ತಲಕಾವೇರಿ ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿಗೆ ಸರಕಾರ 8 ಮಂದಿ ಸದಸ್ಯರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿರುವ ಕೊಡವ ಸಮಾಜಗಳ ಒಕ್ಕೂಟ ಈ ಸಮಿತಿಯನ್ನು ಕೂಡಲೇ ವಿಸರ್ಜಿಸಿ ಹೊಸ ಸಮಿತಿ ಯನ್ನು ಆಯ್ಕೆ ಮಾಡುವಂತೆ ಒತ್ತಾಯಿಸಿದೆ.
ಪತ್ರಿಕಾ ಹೇಳಿಕೆ ನೀಡಿರುವ ಕೊಡವ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಕಾವೇರಿ ಕೊಡಗಿನವರ ಕುಲದೇವತೆ. ಆದರೆ ಸರಕಾರ ರಚಿಸಿರುವ ಈ ಸಮಿತಿಯಲ್ಲಿ ಕೊಡಗಿನವರಿಗೆ ಅವಕಾಶ ಇಲ್ಲದಿರುವದು ವಿಷಾದಕರ ಬೆಳವಣಿಗೆ. ಕುಲದೇವತೆಯ ಸೇವೆ ಮಾಡುವ ಅವಕಾಶವನ್ನು ಕೊಡವರಿಗೆ ನೀಡದೇ, ಕಣ್ಣೊರೆಸುವ ಉದ್ದೇಶಕ್ಕಾಗಿ ಒಂದಿಬ್ಬರಿಗೆ ಅವಕಾಶ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಕೊಡಗು ಜಿಲ್ಲೆಗೆ ಸಂಬಂಧ ಪಡದೇ ಇರುವ ಕೆಲವರನ್ನು ಸಮಿತಿಗೆ ಆಯ್ಕೆಮಾಡಲಾಗಿದ್ದು, ಇದು ಜಿಲ್ಲೆಯ ಕೊಡವ ನಿವಾಸಿಗಳನ್ನು ನಿರ್ಲಕ್ಷ್ಯಕ್ಕೆ ಒಳಪಡಿಸಿರುವದಕ್ಕೆ ಸಾಕ್ಷ್ಯಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿರುವ ಅವರು, ಈಗಾಗಲೇ ನೇಮಿಸಲ್ಪಟ್ಟಿರುವ ಸಮಿತಿಯನ್ನು ಒಡನೆಯೇ ವಿಸರ್ಜಿಸಬೇಕು ಹಾಗೂ ಸಮಿತಿಗೆ ಆಯ್ಕೆ ಮಾಡಲು ಹೊಸದಾಗಿ ಅರ್ಜಿ ಕರೆಯಬೇಕು. ತಪ್ಪಿದ್ದಲ್ಲಿ ಕಾನೂನು ಹೋರಾಟ ಮಾಡುವದಾಗಿ ಎಚ್ಚರಿಸಿದ್ದಾರೆ.
ಜಿಲ್ಲೆಯ ಎಲ್ಲಾ ಕೊಡವ ಸಮಾಜಗಳು ಕೂಡ ಈ ಆಯ್ಕೆ ಬಗ್ಗೆ ತಮ್ಮ ವಿರೋಧವನ್ನು ವ್ಯಕ್ತ ಪಡಿಸಿ, ಜನಾಂಗಕ್ಕೆ ಆಗಿರುವ ಅನ್ಯಾಯದ ವಿರುದ್ಧ ತಮ್ಮ ಪ್ರತಿಭಟನೆಯನ್ನು ತೋರ್ಪಡಿಸ ಬೇಕಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೊಡವ ಸಮಾಜ ಅಸಮಾಧಾನ
ತಲಕಾವೇರಿ ಭಾಗಮಂಡಲ ದೇವಾಲಯ ಸಮಿತಿಗೆ ಆಯ್ಕೆ ಯಾದ ಸದಸ್ಯರ ಪಟ್ಟಿಯಲ್ಲಿ ಕೊಡವರಿಗೆ ಪ್ರಾಮುಖ್ಯತೆ ಕಡಿಮೆ ಕಂಡು ಬಂದಿರುವದಲ್ಲದೆ ಹೊರ ಜಿಲ್ಲೆಯವರನ್ನು ಸಮಿತಿ ಸದಸ್ಯರಾಗಿ ತೆಗೆದುಕೊಂಡಿರುವದು ಸರಿಯಲ್ಲ ವೆಂದು ಕೊಡವ ಸಮಾಜ ಮಡಿಕೇರಿ ಅಸಮದಾನ ವ್ಯಕ್ತಪಡಿಸಿದೆ. ಸದರಿ ಸಮಿತಿಯನ್ನು ವಿಸರ್ಜಿಸಿ ದೇವಸ್ಥಾನಕ್ಕೆ ಸಂಬಂಧಪಡುವ ಕುಟುಂಬದ ಸದಸ್ಯರನ್ನು ಸೇರಿಸಿ ಹೊಸದಾಗಿ ಸಮಿತಿ ರಚಿಸುವಂತೆ ಆಗ್ರಹಿಸಿರುವ ಸಮಾಜದ ಆಡಳಿತ ಮಂಡಳಿಯವರು ಇಲ್ಲವಾದಲ್ಲಿ ಕಾನೂನು ಹೋರಾಟ ನಡೆಸುವದಾಗಿ ಎಚ್ಚರಿಕೆ ನೀಡಿದ್ದಾರೆ.