ವೀರಾಜಪೇಟೆ, ಡಿ.7: ಇಂದಿನ ರಾಜಕೀಯ ಕ್ಷೇತ್ರವನ್ನು ಅವಲೋಕಿಸಿದಾಗ ಮತದಾರರು ದೇಶದ ನ್ಯಾಯಾಂಗ, ಪತ್ರಿಕಾರಂಗದ ಮೇಲೆ ನಂಬಿಕೆಯನ್ನಿಟ್ಟಿದ್ದು ಶಾಸಕಾಂಗದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ರಾಷ್ಟ್ರೀಯ ಪಕ್ಷಗಳು ಚುನಾವಣೆ ವ್ಯವಸ್ಥೆಯನ್ನು ಮೈಲಿಗೆ ಮಾಡುತ್ತಿರುವದರಿಂದ ಚುನಾವಣೆಯಲ್ಲಿ ಈ ಪಕ್ಷಗಳನ್ನು ತಿರಸ್ಕರಿಸುವ ಚಿಂತನೆ ನಡೆಸುತ್ತಿದ್ದಾರೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.
ವೀರಾಜಪೇಟೆಯ ಜೆಡಿಎಸ್ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಅನ್ಯ ಪಕ್ಷಗಳಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಭೌಗೋಳಿಕವಾಗಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಅತಿ ದೊಡ್ಡ ಕ್ಷೇತ್ರವಾಗಿದ್ದು ಪಕ್ಷದ ಸಂಘಟನೆ ಪ್ರಯಾಸದ ಕೆಲಸವಾದರೂ ಈಗಲೂ ಹಿಂದಿನ ಜನತಾ ದಳ ಸರಕಾರದ ಸಾಧನೆಗಳನ್ನು ಮತದಾರರಿಗೆ ಅರಿವು ಮೂಡಿಸುವ ಕಾರ್ಯ ನಿರಂತರವಾಗಲಿದೆ. ಸಂಸದರು, ಶಾಸಕರು, ರಾಜ್ಯ ಸರಕಾರ ಕೊಡಗು ಜಿಲ್ಲೆಯ ಮೂಲ ಸಮಸ್ಯೆಯನ್ನು ಬಗೆಹರಿಸಲು ವಿಫಲವಾಗಿದೆ. ನಿರಂತರ ಕಾಡಾನೆ ದಾಳಿ, ಡಿ.ವೈ.ಎಸ್.ಪಿ. ಗಣಪತಿ ಆತ್ಮಹತ್ಯೆ ಹಗರಣ, ರೈತರ ಆತ್ಮಹತ್ಯೆ ಹಗರಣದಲ್ಲಿ ಸರಕಾರದ ನಿರ್ಲಕ್ಷ್ಯ ಸೇರಿದಂತೆ ಇನ್ನು ಅನೇಕ ಜಲ್ವಂತ ಸಮಸ್ಯೆಗಳು ಜೀವಂತದಲ್ಲಿದೆ. ಕಡು ಬಡವರ, ಬಡವರ, ರೈತರ ಕಣ್ಣೀರು ಒರೆಸುವ ಸರಕಾರದತ್ತ ಮತದಾರರು ಒಲವು ತೋರುತ್ತಿದ್ದಾರೆ. ಈ ಬಾರಿ ಮಾಜಿ ಪ್ರಧಾನಿ ದೇವೇಗೌಡರ ಮಾರ್ಗದರ್ಶನದಲ್ಲಿ ಕುಮಾರಸ್ವಾಮಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಹೇಳಿದರು.
ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಎಸ್.ಎಚ್.ಮತೀನ್ ಮಾತನಾಡಿ ಮೂರು ತಿಂಗಳುಗಳಿಂದ ತಳ ಮಟ್ಟದಿಂದಲೇ ಪಕ್ಷವನ್ನು ಸಂಘಟಿಸಲಾಗುತ್ತಿದೆ. ರಾಷ್ಟ್ರೀಯ ಪಕ್ಷಗಳ ಕಾರ್ಯ ವೈಖರಿ, ಮತದಾರರ ನಿರ್ಲಕ್ಷ್ಯದಿಂದ ಬೇಸತ್ತಿದ್ದಾರೆ. ಮತದಾರರು ವರ್ಗ ಬೇಧವಿಲ್ಲದೆ ಜಾತ್ಯತೀತತೆ, ಸಮಾನತೆಯನ್ನು ಕಾಪಾಡಿಕೊಂಡು ಬಂದಿರುವ ಜನತಾದಳದತ್ತ ಒಲವು ತೋರುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು ಪ್ರಾಮಾಣಿಕತೆಯಿಂದ ಪಕ್ಷವನ್ನು ಸಂಘಟಿಸಿ ಮತದಾರರಿಗೆ ಪಕ್ಷದ ಸಾಧನೆಗಳನ್ನು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.
ಸಭೆಯನ್ನುದ್ದೇಶಿಸಿ ಪಕ್ಷದ ಮುಖಂಡರುಗಳಾದ ಸಿ.ಎ.ನಾಸೀರ್, ಅಮ್ಮಂಡ ವಿವೇಕ್, ಅಮ್ಮತ್ತಿ ಕಾರ್ಮಾಡು ಗ್ರಾಮ ಪಂಚಾಯಿತಿ ಸದಸ್ಯೆ ಜಯಮ್ಮ ಪಕ್ಷದ ಸಂಘಟನೆ ಕುರಿತು ಮಾರ್ಗದರ್ಶನ ನೀಡಿದರು. ವೇದಿಕೆಯಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯೆ ನಾಗಮ್ಮ, ಪಕ್ಷದ ಪದಾಧಿಕಾರಿಗಳಾದ ಬಾಳೆ ಕುಟ್ಟೀರ ದಿನು, ನೂರ್ ಮಹಮ್ಮದ್, ಪಿ.ವಿ.ರೆನ್ನಿ, ಹಯಾತ್ ಷರೀಫ್, ಆರ್.ಎ.ಸಕ್ಲೇನ್, ಇಟ್ಟೀರ ಸಂಪತ್ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಅನ್ಯ ಪಕ್ಷಗಳನ್ನು ತೊರೆದು ಜನತಾದಳ ಪಕ್ಷಕ್ಕೆ ಸೇರ್ಪಡೆಗೊಂಡ 43ಮಂದಿಗೆ ಪಕ್ಷದ ಶಾಲು ಹಾಕಿ ಸ್ವಾಗತಿಸಲಾಯಿತು. ವೀರಾಜಪೇಟೆ ನಗರ ಸಮಿತಿ ಅಧ್ಯಕ್ಷ ಪಿ.ಎ.ಮಂಜುನಾಥ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು.