ಗೋಣಿಕೊಪ್ಪಲು, ಡಿ. 7: ಇತ್ತೀಚೆಗೆ ಗೋಣಿಕೊಪ್ಪಲು ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವೈಲ್ಡ್ ಲೈಫ್ ಫಸ್ಟ್ ಮತ್ತು ಟೈಗರ್ ಪಗ್ ಪರಿಸರ ಸಂಘದ ವತಿಯಿಂದ ನೇಚರ್ ಕ್ಯಾಂಪ್ ಏರ್ಪಡಿಸಲಾಗಿತ್ತು. ಸುಮಾರು 39 ವಿದ್ಯಾರ್ಥಿಗಳು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ(ನಾಗರಹೊಳೆ)ಕ್ಕೆ ತೆರಳಿ ಪರಿಸರ, ವನ್ಯಜೀವಿ ಮತ್ತು ಮಾನವನಿಗಿರುವ ಸಂಬಂಧಗಳ ಸೂಕ್ಷ್ಮತೆಯ ಬಗ್ಗೆ ಅರಿವು ಹೆಚ್ಚಿಸಿಕೊಂಡರು. ವೈಲ್ಡ್ ಲೈಫ್ ಫಸ್ಟ್‍ನ ಅಧ್ಯಕ್ಷರು ಹಾಗೂ ಪರಿಸರ ತಜ್ಞ ಕೆ.ಎಂ. ಚಿಣ್ಣಪ್ಪ ಅವರು ಸ್ವಚ್ಛತೆಯ ಬಗ್ಗೆ, ಜಂಕ್ ಫುಡ್ ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿವರವಾಗಿ ತಿಳಿಸಿದರು. ನಂತರ ವಿದ್ಯಾರ್ಥಿಗಳನ್ನು ಕಾಡಿನ ದಾರಿಯಲ್ಲಿ ನಡೆಸಿಕೊಂಡು ಹೋಗುತ್ತಾ ಕಾಡಿನಲ್ಲಿ ಇರುವೆಗಳ ಮಹತ್ವವನ್ನು ವಿವರಿಸಿದರು.
ಒಣಮರಗಳಿಂದ ಜೀವಿಗಳಿಗೇನು ಪ್ರಯೋಜನ, ಕಾಡು ಹಂದಿಗಳ ಮಹತ್ವ, ಗೆದ್ದಲು, ಕರಡಿಗಳ, ಸಸ್ಯಹಾರಿಗಳ ಮಹತ್ವವನ್ನು ವಿವರಿಸುತ್ತಾ, ಮಕ್ಕಳಿಗೆ ಪ್ರಾಣಿಗಳನ್ನು ಸ್ವತಃ ನೋಡುವದರಿಂದ, ಅವುಗಳ ಕೂಗಿನಿಂದ, ಅವುಗಳ ಹೆಜ್ಜೆ ಗುರುತಿನಿಂದ ಗುರುತಿಸಬಹುದೆಂದು ಪ್ರಯೋಗಿಕವಾಗಿ ತಿಳಿಸಿದರು. ಕಾಡಿನಲ್ಲಿ ಬೆಳೆಯುವ ಸಾಮಾನ್ಯ ಮರಗಳಾದ ಹೊನ್ನೆ, ತಡಸಲು, ಬೀಟೆ, ತೇಗ, ಕಲ್ತೇಗ, ನಂದಿ, ಮತ್ತಿ, ದಿಂಡಲು ಮುಂತಾದ ಸುಮಾರು ಹದಿನೆಂಟು ಮರಗಳನ್ನು ಪಟ್ಟಿಮಾಡಿಸಿ ಅವುಗಳ ವೈಜ್ಞಾನಿಕ ಹೆಸರುಗಳನ್ನು ಕಲಿತುಕೊಳ್ಳುವಂತೆ ಸೂಚಿಸಿದರು.
ಈ ಸಂದರ್ಭ ಸಂಘದ ಸಂಚಾಲಕ ಮತ್ತು ರಾಜ್ಯ ಶಿಕ್ಷಕ ಪ್ರಶಸ್ತಿ ವಿಜೇತರಾದ ಡಿ. ಕೃಷ್ಣ ಚೈತನ್ಯ, ಶಿಕ್ಷಕಿಯರಾದ ರಶ್ಮಿ ಮತ್ತು ಸುನಿತ ಜತೆಗಿದ್ದರು.