ಕೂಡಿಗೆ, ಡಿ. 6: ತರಗತಿಯಲ್ಲಿ ಪಾಠ ನಡೆಯುವ ಸಂದರ್ಭ ವಿದ್ಯಾರ್ಥಿ ನಗುತ್ತಿದ್ದ ಎಂಬ ಕಾರಣಕ್ಕೆ ಶಿಕ್ಷಕ ವಿದ್ಯಾರ್ಥಿಗೆ ಥಳಿಸಿದ ಘಟನೆ ಕೂಡಿಗೆ ಸರ್ಕಾರಿ ಕ್ರೀಡಾಶಾಲೆಯಲ್ಲಿ ನಡೆದಿದೆ.

ಕ್ರೀಡಾಶಾಲೆಯ 9ನೇ ತರಗತಿಯ ವಿಘ್ನೇಶ್ ವಿದ್ಯಾರ್ಥಿಯು ತರಗತಿಯಲ್ಲಿ ಪಾಠ ನಡೆಯುತ್ತಿದ್ದ ಸಂದರ್ಭ ಕಿವಿಗೆ ಹುಳು ಹೊಕ್ಕಿದಂತಾಗಿ ತನ್ನ ಕೈಯಿಂದ ಕಿವಿಗೆ ಬೀಸಿಕೊಂಡಿದ್ದನ್ನು ಗಮನಿಸಿದ ಕನ್ನಡ ಶಿಕ್ಷಕ ಮುರುಳಿ, ಪ್ರಶ್ನಿಸಿದ್ದಕ್ಕೆ ಪ್ರತ್ಯುತ್ತರ ನೀಡಿದ ಎಂದು ಸಿಟ್ಟುಗೊಂಡು ಕೈಗೆ ಮತ್ತು ಬೆನ್ನಿಗೆ ಬೆತ್ತದಿಂದ ಥಳಿಸಿದ ಪರಿಣಾಮ ಬಾಸುಂಡೆಗಳು ಮೂಡಿದ್ದು, ಗಾಯಗಳಾಗಿರುವದು ಕಂಡುಬಂದಿದೆ. ಬಾಸುಂಡೆಗಳನ್ನು ಗಮನಿಸಿದ ವೀಘ್ನೇಶ್ ಸ್ನೇಹಿತರು ಅವನ ತಂದೆ ತಾಯಿಗೆ ತಿಳಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ಪೋಷಕರು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಯಿನಿ ಮತ್ತು ಶಿಕ್ಷಕ ವೃಂದ ಆಸ್ಪತ್ರೆಗೆ ಭೇಟಿ ನೀಡಿ, ವಿದ್ಯಾರ್ಥಿಯ ಯೋಗಕ್ಷೇಮ ವಿಚಾರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ವಿದ್ಯಾರ್ಥಿಯನ್ನು ಪೋಷಕರು ಮನೆಗೆ ಕರೆದುಕೊಂಡು ಹೋಗಿದ್ದು, ಮರುದಿನ ಶಾಲೆಗೆ ಕಳುಹಿಸುತ್ತೇವೆ ಎಂದು ಮುಖ್ಯೋಪಾಧ್ಯಾಯರಿಗೆ ಪೋಷಕರು ತಿಳಿಸಿದ್ದಾರೆ.