ಮಡಿಕೇರಿ, ಡಿ.6: ಸಂಪಾಜೆ ಲಯನ್ಸ್ ಕ್ಲಬ್‍ಗೆ ಪ್ರಾಂತೀಯ ಅಧ್ಯಕ್ಷ ಜಯರಾಮ ದೇರಪ್ಪಜ್ಜನಮನೆ ರವರು ಅಧಿಕೃತ ಭೇಟಿ ನೀಡಿದರು.

ಈ ಸಂದರ್ಭ ವಿಶೇಷಚೇತನರಿಗೆ ವ್ಹೀಲ್ ಚೇರ್, ಬಡವರಿಗೆ ಅಕ್ಕಿ ವಿತರಣೆ ಮಾಡಲಾಯಿತು. ಮಡಿಕೇರಿಯ ವೃದ್ಧಾಶ್ರಮಕ್ಕೆ ಶಾಲು ನೀಡಲಾಯಿತು ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾ. ಸದಾನಂದ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಮಡಿಕೇರಿ ಎಫ್‍ಎಂಸಿ ಕಾಲೇಜಿನ ದ್ವಿತೀಯ ಬಿಎಸ್ಸಿ ಪ್ರತಿಭಾವಂತ ವಿದ್ಯಾರ್ಥಿ ಲೋಹಿತ್‍ಗೆ ಲಯನ್ಸ್ ಇಂಟರ್ ನ್ಯಾಶನಲ್ ಕ್ಲಬ್‍ನಿಂದ ಕೊಡಮಾಡುವ ಸ್ಕಾಲರ್‍ಶಿಪ್ ನಗದು ರೂ.20,000 ಯ ಚೆಕ್‍ನ್ನು ಹಸ್ತಾಂತರಿಸಲಾಯಿತು.

ಸಮಾರಂಭದಲ್ಲಿ ಕ್ಲಬ್ಬಿನ ಅಧ್ಯಕ್ಷೆ ಅಮೃತಾ ಅಪ್ಪಣ್ಣ ಅಧ್ಯಕ್ಷತೆಯನ್ನು ವಹಿಸಿದ್ದರು. ಕ್ಲಬ್‍ನ ಕಾರ್ಯದರ್ಶಿ ವಾಸುದೇವ ಕಟ್ಟೆಮನೆ, ಖಜಾಂಜಿ ಲೆಸ್ಸಿ ಸಿಲ್ವೆಸ್ಟರ್ ಹಾಗೂ ಗುತ್ತಿಗಾರು, ಪಂಜ, ಸುಳ್ಯ, ಜಾಲ್ಸೂರು ಮತ್ತು ಸಂಪಾಜೆ ಲಯನ್ಸ್ ಕ್ಲಬ್‍ನ ಸದಸ್ಯರು ಉಪಸ್ಥಿತರಿದ್ದರು.