* ವೀರಾಜಪೇಟೆ, ಡಿ. 5: ವಿಶೇಷ ಚೇತನ ಮಕ್ಕಳಿಗೆ ಉತ್ತಮ ಸ್ಥಾನ ನೀಡುವದರೊಂದಿಗೆ ಅವರಿಗೆ ವಿಶೇಷ ಸೌಲಭ್ಯಗಳನ್ನು ನೀಡಿ ಎಲ್ಲರಂತೆ ಅವರನ್ನು ಮುಖ್ಯ ವಾಹಿನಿಗೆ ತರಲು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ ಹೇಳಿದರು.

ಕೊಡಗು ಜಿಲ್ಲಾ ಪಂಚಾಯತ್, ಸರ್ವಶಿಕ್ಷಣ ಅಭಿಯಾನ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವೀರಾಜಪೇಟೆ ತಾಲೂಕು ವತಿಯಿಂದ ವಿಶ್ವ ವಿಶೇಷ ಚೇತನ ಮಕ್ಕಳ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿರುವ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ.ಜೀವನ್ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿರುವಂತಹ ವಿಶೇಷ ಚೇತನ ಮಕ್ಕಳನ್ನು ಗುರುತಿಸಿ ಅವರಿಗೂ ಸರಕಾರದಿಂದ ಸಿಗುವಂತಹ ವಿಶೇಷ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಲು ಮಕ್ಕಳ ಪೋಷಕರು ಮುಂದಾಗಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎ. ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಪಿ. ಮಹದೇವ ಸ್ವಾಗತಿಸಿ, ಐ.ಇ.ಆರ್.ಟಿ. ಅಜಿತ ನಿರೂಪಿಸಿ, ಬಿ.ಆರ್.ಪಿ. ಕೆ.ಸಿ. ಗೀತಾಂಜಲಿ ವಂದಿಸಿದರು. ಸಮಾರಂಭದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಅಂಗವಿಕಲ ಮಕ್ಕಳಿಗಾಗಿ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ನೃತ್ಯ, ಗಾಯನ, ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ನಗದು ಹಾಗೂ ಬಹುಮಾನಗಳನ್ನು ವಿತರಿಸಲಾಯಿತು. ತಾಲೂಕಿನ 125 ಅಂಗವಿಕಲ ಮಕ್ಕಳು ಹಾಗೂ ಅವರ ಪೋಷಕರುಗಳು ಭಾಗವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ. ಗಣೇಶ್, ಶಿಕ್ಷಣ ಸಂಯೋಜಕಿ ಅಂದ್ರೀತಾ ಹಾಗೂ ಇತರರು ಉಪಸ್ಥಿತರಿದ್ದರು.