ಗೋಣಿಕೊಪ್ಪ ವರದಿ, ಡಿ. 5: ಮಕ್ಕಳ ಖಿನ್ನತೆಗೆ ಒಳಗಾದಂತೆ ಪೋಷಕರು ಕಾಳಜಿ ವಹಿಸಬೇಕು ಎಂದು ಮಾಜಿ ಅಂತಾರಾಷ್ಟ್ರೀಯ ಕ್ರೀಡಾಪಟು ಅರ್ಜುನ್ ದೇವಯ್ಯ ಸಲಹೆ ನೀಡಿದರು.ಲಯನ್ಸ್ ಪ್ರಾಥಮಿಕ, ಪ್ರೌಢÀ ಹಾಗೂ ಕಾಲೇಜು ವಿದ್ಯಾ ಸಂಸ್ಥೆಗಳ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳನ್ನು ಸ್ಪರ್ಧಿಗಳಂತೆ ಬಿಂಬಿಸುತ್ತಿರುವದು ಉತ್ತಮ ಬೆಳವಣಿಗೆಯಲ್ಲ. ಸ್ಪರ್ಧಾ ಮನೋಭಾವದಿಂದ ಮಕ್ಕಳಿಗೆ ಒತ್ತಡ ಹಾಕುವ ಮೂಲಕ, ಮಕ್ಕಳು ಒತ್ತಡದಿಂದ ಹೊರಬರಲಾಗದೆ ಸಮಾಜದಿಂದ ದೂರ ಉಳಿದು ಏಕಾಂಗಿ ಮನೋಭಾವದಿಂದ ಬದುಕು ಸಾಗಿಸುವಂತಾಗಿದೆ. ಇದು ಮಕ್ಕಳನ್ನು ಮಾನಸಿಕ ಖಿನ್ನತೆಗೆ ಬಲಿಯಾಗುವಂತೆ ಮಾಡುತ್ತಿರುವದು ಆತಂಕಕಾರಿ ಎಂದು ಕಳವಳ ವ್ಯಕ್ತಪಡಿಸಿದರು. ಮಕ್ಕಳು ಇಷ್ಟಪಡುವ ಕ್ರೀಡೆ, ಓದು ಹಾಗೂ ಪಠ್ಯೇತರ ಚಡುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕು. ಪಠ್ಯೇತರ ಕೂಡ ಶಿಕ್ಷಣ ಎಂಬುವದನ್ನು ಅರಿತುಕೊಂಡು ಮಕ್ಕಳನ್ನು ಬೆಳೆಸುವ ಅವಶ್ಯಕತೆ ಇದೆ ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಅನಾವರಣಗೊಂಡಿತು. ಪುಟ್ಟ ಮಕ್ಕಳು ಆಕರ್ಷಕ ಉಡುಗೆಯೊಂದಿಗೆ ಗುಂಪು ನೃತ್ಯ ನೀಡಿದರು. ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕøತಿಕವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಪ್ರಾಂಶುಪಾಲರುಗಳಾದ ಪಿ. ಡಿ. ತಂಗಮ್ಮ, ಎ. ಬಿ. ಅಕ್ಕಮ್ಮ, ಕೆ. ಸಿ. ಪವಿತ್ರ ಶಾಲಾ ವರದಿ ವಾಚಿಸಿದರು. ಈ ಸಂದರ್ಭ ಲಯನ್ಸ್ ರಾಜ್ಯಪಾಲ ಹೆಚ್. ಆರ್. ಹರೀಶ್, ಲಯನ್ಸ್ ಟ್ರಸ್ಟ್ ಮುಖ್ಯಸ್ಥ ಚೆಪ್ಪುಡೀರ ಅಪ್ಪಣ್ಣ, ಅಧ್ಯಕ್ಷ ಸೋಮೇಯಂಡ ಪೂಣಚ್ಚ, ಕಾರ್ಯದರ್ಶಿ ಪ್ರಣಿತಾ ಪೂಣಚ್ಚ, ವಿದ್ಯಾರ್ಥಿ ನಾಯಕರುಗಳಾದ ಎಂ. ಕೆ. ಕಾವೇರಪ್ಪ, ಗೋಕುಲ್ ತಿಮ್ಮಯ್ಯ, ಕೆ. ಎಂ. ಕಾವೇರಮ್ಮ ಉಪಸ್ಥಿತರಿದ್ದರು.