ಸೋಮವಾರಪೇಟೆ, ಡಿ. 5: ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ವ ಶಿಕ್ಷಾ ಅಭಿಯಾನದ ಮೂಲಕ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ವಿಕಲಚೇತನರ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗೆ ಕೇವಲ 10 ಮಕ್ಕಳು ಮಾತ್ರ ಭಾಗವಹಿಸಿದ್ದು ಇಲಾಖಾ ಸಿಬ್ಬಂದಿಗಳ ಇಚ್ಛಾಶಕ್ತಿಗೆ ಸಾಕ್ಷಿ ಒದಗಿಸಿತು.ಸೋಮವಾರಪೇಟೆ ತಾಲೂಕಿನಲ್ಲಿ 300ಕ್ಕೂ ಅಧಿಕ ವಿಕಲಚೇತನ ಮಕ್ಕಳಿದ್ದು, ಪಂಚಾಯಿತಿಗೆ ಸರಾಸರಿ 15ರಷ್ಟು ವಿಕಲಚೇತನರು ಇದ್ದಾರೆ ಎಂಬ ಮಾಹಿತಿ ಒಂದೆಡೆಯಾದರೆ, ಸರ್ವ ಶಿಕ್ಷಾ ಅಭಿಯಾನದ ಮೂಲಕ ನಡೆಸಿದ ಕ್ರೀಡಾಕೂಟದಲ್ಲಿ ಕೇವಲ 10 ಮಂದಿ ಮಕ್ಕಳು ಹಾಗೂ 7 ಮಂದಿ ವಿಕಲಚೇತನ ಪೋಷಕರು ಭಾಗವಹಿಸಿದ್ದರು.

ಸರ್ವ ಶಿಕ್ಷಾ ಅಭಿಯಾನದ ಮೂಲಕ 5 ರಿಂದ 8ನೇ ತರಗತಿಯ ವಿಕಲಚೇತನ ಮಕ್ಕಳ ಕ್ರೀಡಾಕೂಟಕ್ಕೆ 20 ಸಾವಿರ ಹಾಗೂ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣದ ಮೂಲಕ 9 ಮತ್ತು 10ನೇ ತರಗತಿ ಮಕ್ಕಳ ಕ್ರೀಡಾಕೂಟಕ್ಕೆ 5 ಸಾವಿರ ಸಹಾಯಧನ ಬಿಡುಗಡೆಗೊಳ್ಳುತ್ತದೆ.

ಒಟ್ಟು 25 ಸಾವಿರ ವೆಚ್ಚದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಬೇಕಿದೆ. ಸರ್ವ ಶಿಕ್ಷಾ ಅಭಿಯಾನದಲ್ಲಿಯೇ ಮೂವರು ಸಂಪನ್ಮೂಲ ವ್ಯಕ್ತಿಗಳಿದ್ದು, ಕ್ರೀಡಾಕೂಟಕ್ಕೆ ಪ್ರೌಢಶಾಲೆಯಿಂದ ಕೇವಲ ಓರ್ವ ವಿದ್ಯಾರ್ಥಿ, 5 ರಿಂದ 8ನೇ ತರಗತಿಯ 9 ವಿದ್ಯಾರ್ಥಿಗಳು, 7 ಮಂದಿ ಪೋಷಕರು ಭಾಗವಹಿಸಿದ್ದರು. ಒಟ್ಟಾರೆ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಬೆರಳೆಣಿಕೆಯ ಮಕ್ಕಳು ಭಾಗವಹಿಸುವ ಮೂಲಕ ಇಲಾಖೆಯ ಕಾರ್ಯಕ್ರಮವೊಂದು ಕಾಟಾಚಾರಕ್ಕೆ ನಡೆದಿದೆ.