ಮಡಿಕೇರಿ, ಡಿ. 5: ಆರ್ಥಿಕವಾಗಿ ಲಾಭದಾಯಕ ಹೊಂದುವ ಆಮಿಷದೊಂದಿಗೆ, ಶಿಕ್ಷಕಿಯೊಬ್ಬರು ಸಹರಾ ಇಂದಿಯಾ ಸಂಸ್ಥೆಗೆ ಕಂತಿನಲ್ಲಿ ಪಾವತಿಸಿದ್ದ ರೂ. 60 ಸಾವಿರ ಹಣವನ್ನು ಅವಧಿ ಮುಗಿದರೂ ಸಂಸ್ಥೆ ಮರುಪಾವತಿಸದೆ ವಂಚಿಸಿರುವದು ಬೆಳಕಿಗೆ ಬಂದಿದೆ.

ಈ ಬಗ್ಗೆ ಬಿಟ್ಟಂಗಾಲದ ಶಾಲಾ ಶಿಕ್ಷಕಿ ಸುಮಿತ್ರ ಎಂಬವರು ವೀರಾಜಪೇಟೆ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ದಾಖಲಿಸುವದರೊಂದಿಗೆ, ಸಂಸ್ಥೆಯ ಆಡಳಿತ ನಿರ್ದೇಶಕರು ಹಾಗೂ ವ್ಯವಸ್ಥಾಪಕ ಮತ್ತು ಏಜೆಂಟ್ ವಿರುದ್ಧ ಕ್ರಮಕ್ಕೆ ಕೋರಿದ್ದಾರೆ.

ಆ ಮೇರೆಗೆ ವೀರಾಜಪೇಟೆ ನ್ಯಾಯಾಲಯವು ದೂರು ಸ್ವೀಕರಿಸಿ ಪೊಲೀಸ್ ಇಲಾಖೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ. ಈ ಸಂಬಂಧ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಸಂಸ್ಥೆಯ ನಿರ್ದೇಶಕರು ಸೇರಿದಂತೆ ವ್ಯವಸ್ಥಾಪಕ ಮನೋಹರ್ ಹಾಗೂ ಏಜೆಂಟ್ ಎ. ಈಶ್ವರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವದಾಗಿ ತಿಳಿದು ಬಂದಿದೆ.