ಕೂಡಿಗೆ, ಡಿ. 2: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯು ಪ್ರವಾಸಿಗರ ಕೇಂದ್ರವಾಗಿದ್ದು, ಈ ಸ್ಥಳಕ್ಕೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಸಾವಿರಾರು ಪ್ರವಾಸಿಗರು ಬರುತ್ತಿರುತ್ತಾರೆ. ಈ ವ್ಯಾಪ್ತಿಯಲ್ಲಿ ಈಗಾಗಲೇ ಉದ್ಘಾಟನೆಗೊಂಡಿರುವ ಬೃಂದಾವನ ಮತ್ತು ಅಣೆಕಟ್ಟೆಯ ವೀಕ್ಷಣೆಗೆ ಅನುಕೂಲವಾಗಿದೆ. ಆದರೆ, ಪ್ರವಾಸಿಗರು ಮನಬಂದಂತೆ ಪ್ಲಾಸ್ಟಿಕ್‍ಗಳನ್ನು ಎಲ್ಲೆಂದರಲ್ಲಿ ಎಸೆದು ಪರಿಸರವನ್ನು ಹಾಳುಗೆಡುತ್ತಿದ್ದಾರೆ.

ಇದರ ಬಗ್ಗೆ ಗ್ರಾಮ ಪಂಚಾಯಿತಿ ಅಥವಾ ಕಾವೇರಿ ನೀರಾವರಿ ನಿಗಮದವರು ಸೂಚನ ಫಲಕಗಳನ್ನು ಅಳವಡಿಸಿಲ್ಲ. ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಿ ಎಂಬ ಘೋಷಣೆಗಳು ದಿನಂಪ್ರತಿ ಬಾಯಿಯಿಂದ ಬಾಯಿಗೆ ಹೋಗುತ್ತಿದ್ದರೂ ಶುಚಿತ್ವಕ್ಕೆ ತಮ್ಮನ್ನು ತೊಡಗಿಸಿಕೊಳ್ಳದಿರುವದು ಬೇಸರ ತಂದಿರುತ್ತದೆ ಎಂದು ಅಕ್ಕಪಕ್ಕ ಗ್ರಾಮಸ್ಥರು ಸ್ಥಳಕ್ಕೆ ತೆರಳಿದ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಲಾಖೆಯಾಗಲೀ ಅಥವಾ ಗ್ರಾಮ ಪಂಚಾಯಿತಿ ಆಗಲಿ ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಿ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ಸಾರ್ವಜನಿಕ ಹೋರಾಟ ಸಮಿತಿಯ ಕಾರ್ಯದರ್ಶಿ ಲವನಂಜಪ್ಪ ಆಗ್ರಹಿಸಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ