ಗೋಣಿಕೊಪ್ಪಲು, ಡಿ. 1: ಮಕ್ಕಳನ್ನು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿಸುವದರಿಂದ ಮಾತ್ರ ಕನ್ನಡವನ್ನು ಉಳಿಸಿ ಬೆಳೆಸಲು ಸಾಧ್ಯ ಎಂದು ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ಬುಟ್ಟಿಯಂಡ ತಂಬಿ ನಾಣಯ್ಯ ಅಭಿಪ್ರಾಯಪಟ್ಟರು.
ಬಿರುನಾಣಿ ಸರ್ಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಶ್ರೀಮಂಗಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕ, ಸ್ಥಳೀಯ ಗ್ರಾ.ಪಂ., ಮಹಿಳಾ ಸಮಾಜ, ಮರೆನಾಡು ಕೊಡವ ಸಮಾಜ ಹಾಗೂ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಮಾಸಾಚರಣೆಯ ಅಂಗವಾಗಿ ಪ್ರಾಢಶಾಲಾ ವಿದ್ಯಾರ್ಥಿಗಳಿಗೆ ಜನಪದ ನೃತ್ಯ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಕನ್ನಡ ಬೆಳೆಸಲು ಕಾರ್ಯಕ್ರಮ ದಿಂದ ಸಾಧ್ಯವಿಲ್ಲ. ಮಕ್ಕಳಲ್ಲಿ ಕನ್ನಡದ ಬಗ್ಗೆ ಅಭಿಮಾನ ಮೂಡಿಸಲು ಯೋಜನೆಗಳನ್ನು ರೂಪಿಸಬೇಕು. 5ನೇ ತರಗತಿಯವರೆಗೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಕನ್ನಡದಲ್ಲೇ ವ್ಯಾಸಂಗ ಮಾಡಬೇಕು ಎಂದು ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮುಲ್ಲೇಂಗಡ ಮದೋಷ್ ಪೂವಯ್ಯ ಮಾತನಾಡಿ, ಗಡಿಪ್ರದೇಶದಲ್ಲಿ ಕನ್ನಡ ಶಾಶ್ವತವಾಗಿ ನಿಲ್ಲಬೇಕು. ಕನ್ನಡದ ಸೋದರ ಭಾಷೆಯಾಗಿ ಕೊಡವ ಭಾಷೆಯು ಇದೆ. ಇದರ ಅಭಿವೃದ್ಧಿ ಸಾಹಿತ್ಯ ಬೆಳವಣಿಗೆಯಾಗಬೇಕು. ಮನೆಯಲ್ಲಿ ಯಾವದೇ ಭಾಷೆ ಮಾತನಾಡದರೂ ಕನ್ನಡ ಪ್ರತಿಯೊಬ್ಬರ ಮನದ ಭಾಷೆ ಯಾಗಿರಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಶ್ರೀಮಂಗಲ ಹೋಬಳಿ ಘಟಕದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ಕೊಡವ ಸಮಾಜ ಅಧ್ಯಕ್ಷ ಮುಲ್ಲೇಂಗಡ ಪೆಮ್ಮಯ್ಯ, ಬಿರುನಾಣಿ ಸರಕಾರಿ ಪ್ರಾಥಮಿಕ ಶಾಲಾ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಹೆಚ್.ಆರ್. ತುಳಸಿ, ಮಹಿಳಾ ಸಮಾಜದ ಉಪಾಧ್ಯಕ್ಷೆ ಕಳಕಂಡ ಸುಶೀಲಾ ಡಾಲಿ, ಹೋಬಳಿ ಘಟಕದ ಕಾರ್ಯದರ್ಶಿ ಬುಟ್ಟಿಯಂಡ ಸುನಿತಾ ಗಣಪತಿ ಹಾಜರಿದ್ದರು.
ಸ್ಥಳೀಯ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ ಪೈಪೋಟಿ ಹಾಗೂ ಗೀತಗಾಯನ ಕಾರ್ಯಕ್ರಮ ನಡೆಯಿತು.