ನಾಪೋಕ್ಲು, ಡಿ. 1: ಮಡಿಕೇರಿ-ಭಾಗಮಂಡಲ ಮುಖ್ಯ ರಸ್ತೆ ತೀವ್ರ ಹದಗೆಟ್ಟು ವಾಹನ ಸಂಚಾರಕ್ಕೆ ತೊಡಕಾಗಿದ್ದು, ಈ ರಸ್ತೆಯ ದುರಸ್ತಿ ಕಾರ್ಯಕ್ಕೆ ಸರ್ಕಾರವಾಗಲೀ, ಲೋಕೋಪಯೋಗಿ ಇಲಾಖೆ ಯಾಗಲೀ ಗಮನಹರಿಸದೇ ಇರುವದರಿಂದ ತಾ. 13ರ ಒಳಗೆ ದುರಸಿ ್ತಕಾರ್ಯಕ್ಕೆ ಮುಂದಾಗಬೇಕು. ತಪ್ಪಿದಲ್ಲಿ ಎಲ್ಲರ ಸಹಕಾರದೊಂದಿಗೆ ತಾ. 14ರಂದು ಬೆಳಿಗ್ಗೆ 7 ಗಂಟೆಯಿಂದ ಕಾರುಗುಂದದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವದು ಎಂದು ಕಾರುಗುಂದದಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.

ಕಾರುಗುಂದದ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ವಿಎಸ್‍ಎಸ್‍ಎನ್ ಅಧ್ಯಕ್ಷ ರ್ಯಾಲಿಮಾದಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಚರ್ಚಿಸಿ ನಿರ್ಧಾರಕ್ಕೆ ಬರಲಾಯಿತು. ಸಭೆಯಲ್ಲಿ 13 ಜನರ ಹೋರಾಟ ಸಮಿತಿಯನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರನ್ನಾಗಿ ರ್ಯಾಲಿ ಮಾದಯ್ಯ ಅವರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು.

ಬಳಿಕ ಮಾತನಾಡಿದ ರ್ಯಾಲಿ ಮಾದಯ್ಯ ಮಡಿಕೇರಿ ಭಾಗಮಂಡಲ ಮುಖ್ಯ ರಸ್ತೆಯು ಈ ಭಾಗದ ಜನರಿಗೆ ಮಾತ್ರ ಸಂಬಂಧಪಟ್ಟಿದ್ದಲ್ಲ. ಜೀವನದಿ ಕಾವೇರಿಯ ಪುಣ್ಯ ಸ್ಥಳವಾಗಿದ್ದು, ಅಧಿಕ ಸಂಖ್ಯೆಯ ಭಕ್ತರು, ಪ್ರವಾಸಿಗರು ವಾಹನಗಳ ಮೂಲಕ ಬರುತ್ತಾರೆ. ಸಾವಿರಾರು ಮಂದಿ ತೆರಳುವ ರಸ್ತೆ ಹದಗೆಟ್ಟಿರುವದರಿಂದ ದುರಸ್ತಿಗೆ ಸ್ಪಂದನ ಸಿಗದಿದ್ದಲ್ಲಿ ತಾ. 14 ರಂದು ಬೆಳಿಗ್ಗೆ 7 ಗಂಟೆಯಿಂದ ಎಲ್ಲಾ ಸಂಘ ಸಂಸ್ಥೆಗಳ, ಜನಪ್ರತಿನಿಧಿಗಳ, ಸಾರ್ವಜನಿಕರ ಸಹಕಾರದೊಂದಿಗೆ ಪ್ರತಿಭಟನೆ ನಡೆಸಲಿದ್ದು, ಎಲ್ಲರೂ ಸಹಕರಿಸಿ ಬಂದ್ ಯಶಸ್ವಿ ಗೊಳಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ಚೇರಂಬಾಣೆ ಕೊಡವ ಸಮಾಜದ ಅಧ್ಯಕ್ಷ ಕುಟ್ಟೇಟಿರ ಕುಂಞಪ್ಪ, ಚೇರಂಬಾಣೆ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಪ್ಪು ಗಣಪತಿ, ಚೇರಂಬಾಣೆ ವಾಹನ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಬೈಮನ ಜಗದೀಶ್, ವಲಯ ಕಾಂಗ್ರೆಸ್ ಅಧ್ಯಕ್ಷ ನಾಪಂಡ ಗಣೇಶ್, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷÀ ಕಾಳನ ರವಿ, ತಾಲೂಕು ಪಂಚಾಯಿತಿ ಸದಸ್ಯ ದಬ್ಬಡ್ಕ ಶ್ರೀಧರ್, ಕಾಫಿ ಬೆಳೆಗಾರ ಮೊಟ್ಟೆಯಂಡ ಕರುಂಬಯ್ಯ, ಚೇರಂಬಾಣೆ ವಿಎಸ್‍ಎಸ್‍ಎನ್ ಅಧ್ಯಕ್ಷ ಬಾಚರಣಿಯಂಡ ಸುಮನ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿ ಗಳು ಜನಪ್ರತಿನಿಧಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.