ಗೋಣಿಕೊಪ್ಪ ವರದಿ, ಡಿ. 1 : ಕಿರಿಯರಲ್ಲಿನ ಕ್ರಿಕೆಟ್ ಪ್ರತಿಭೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ಲಬ್ ಮಹಿಂದ್ರಾ ಟ್ರೋಫಿ ಹಾಗೂ ಆಲಿ ಟೂರ್ಸ್ ಟ್ರೋಫಿ ಟೂರ್ನಿಯನ್ನು ಆಯೋಜಿಸಲಾಗಿದೆ ಎಂದು ಕೂರ್ಗ್ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಮಾಚಿಮಂಡ ಕುಮಾರ್ ಅಪಚ್ಚು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂತರ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಕ್ಲಬ್ ಮಹಿಂದ್ರಾ ಟ್ರೋಫಿ ಏರ್ಪಡಿಸಲಾಗಿದೆ. ಕೂರ್ಗ್ ಪಬ್ಲಿಕ್ ಶಾಲಾ ಮೈದಾನದಲ್ಲಿ ತಾ. 5 ರಂದು ನಡೆಯುವ ಪಂದ್ಯಾಟವು 16 ವರ್ಷದಳೊಗಿನವರಿಗೆ ಸೀಮಿತವಾಗಿದ್ದು ಆಟಗಾರರು 1.9.2001 ರೊಳಗೆ ಜನಿಸಿರಬೇಕು ಎಂದು ಮಾಹಿತಿ ನೀಡಿದರು.

ಪದವಿ ಪೂರ್ವ ಮಟ್ಟದ ವಿದ್ಯಾರ್ಥಿಗಳಗೆ ಸೀಮಿತವಾಗಿರುವ ಆಲಿ ಟೂರ್ಸ್ ಟ್ರೋಫಿಯಲ್ಲಿ ಭಾಗವಹಿಸಲು ಆಟಗಾರರು 1-9-1997 ರೊಳಗೆ ಜನಿಸಿರಬೇಕು. ಪಂದ್ಯಗಳು ಪಾಲಿಬೆಟ್ಟದ ಟಾಟಾ ಕಾಫಿ ಮೈದಾನದಲ್ಲಿ ಡಿಸೆಂಬರ್ 9 ರಿಂದ ನಡೆಯಲಿದೆ ಎಂದು ಹೇಳಿದರು.

ಟೂರ್ನಿ ನಡೆಯವ ವೇಳೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ ಆಯೋಜಿಸಿರುವ ಸ್ಪಿನರ್ಸ್ ಕ್ಯಾಂಪ್‍ಗೆ 15 ಸ್ಪಿನ್ ಬೌಲರ್‍ಗಳ ಆಯ್ಕೆ ನಡೆಯಲಿದೆ. ಕ್ರಿಕೆಟ್‍ನಲ್ಲಿ ಆಸಕ್ತಿ ಹೊಂದಿರುವ ಪ್ರತಿಭೆಗಳನ್ನು ಗುರುತಿಸುವ ದಿಸೆಯಲ್ಲಿ ಕೊಡವ ಸಮಾಜಗಳ ನಡುವಿನ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟ ನಡೆಸಲು ಫೆಡರೇಶನ್ ಆಫ್ ಕೊಡವ ಸಮಾಜದ ಆಡಳಿತ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಜನವರಿ ತಿಂಗಳಿನಲ್ಲಿ ಜನಾಂಗಗಳ ಮಧ್ಯೆ ಬಾಂಧವ್ಯ ಉತ್ತಮಗೊಳಿಸುವ ಧ್ಯೇಯದೊಂದಿಗೆ ಜನಾಂಗಗಳ ನಡುವೆ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲು ಕೂರ್ಗ್ ಕ್ರಿಕೆಟ್ ಅಕಾಡೆಮಿ ಉತ್ಸುಕವಾಗಿದ್ದು ಶೀಘ್ರದಲ್ಲಿ ನಿರ್ಧಾರವನ್ನು ಪ್ರಕಟಿಸಲಾಗುವದು ಎಂದರು. ಗೋಷ್ಠಿಯಲ್ಲಿ ಕಾರ್ಯದರ್ಶಿ ಅರುಣ್ ಚಂಗಪ್ಪ ಉಪಸ್ಥಿತರಿದ್ದರು.