ಕೂಡಿಗೆ, ಡಿ. 1: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಹಾಗೂ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನ ಹಳ್ಳಿಯಲ್ಲಿರುವ ಆದಿವಾಸಿಗಳ ಪುನ ರ್ವಸತಿ ಕೇಂದ್ರದಲ್ಲಿ ಸ್ಥಗಿತಗೊಂಡಿದ್ದ ಮನೆ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆತು ಕಾಮಗಾರಿ ಸಾಗುತ್ತಿದೆ. 552 ಕುಟುಂಬಗಳು ವಾಸಿಸುತ್ತಿರುವ ಈ ಕೇಂದ್ರಗಳಲ್ಲಿ ಕಳೆದ ಎರಡು ತಿಂಗಳ ಹಿಂದೆ ಸರಕಾರದಿಂದ ಹಣ ಮಂಜೂರಾಗದೆ ಅಡಿಪಾಯ ಕಾಮಗಾರಿಯನ್ನು ಪೂರ್ಣಗೊಳಿಸಿ ಮನೆ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರನ್ವಯ ಕಳೆದ ತಿಂಗಳಿನಿಂದ ಮನೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಗೋಡೆ ಕಟ್ಟುವ ಕಾಮಗಾರಿಯು ಪ್ರಗತಿಯಲ್ಲಿದೆ.
ಈಗಾಗಲೇ ಒಂದು ಮನೆ ನಿರ್ಮಾಣದ ವೆಚ್ಚ 3.91 ಲಕ್ಷ ರೂ ಆಗಿದ್ದು, ಹಣ ಸರ್ಕಾರದಿಂದ ಬಿಡುಗಡೆಯಾಗಿ ಜಿಲ್ಲಾಧಿಕಾರಿ ಮತ್ತು ಐಡಿಡಿಪಿ ಅವರ ಖಾತೆಯಲ್ಲಿ ಸೇರಿದ್ದರೂ ಅಲ್ಲಿಂದ ಬಿಡುಗಡೆಯಾಗದೆ ಗುತ್ತಿಗೆದಾರರು ಕಾಮಗಾರಿ ಪೂರ್ಣ ಗೊಳಿಸಲು ಅಣಿಯಾಗಿದ್ದಾರೆ.
ತಾತ್ಕಾಲಿಕ ಶೆಡ್‍ಗಳನ್ನು ಕಳೆದ ಐದು ತಿಂಗಳ ಹಿಂದೆ ಬ್ಯಾಡಗೊಟ್ಟಲ್ಲಿ ನಿರ್ಮಿಸಿಕೊಟ್ಟರೂ ಬಾಗಿಲುಗಳ ಅಳತೆಯನ್ನು ತೆಗೆದುಕೊಂಡು ಹೋದವರು ಇದುವರೆಗೂ ಶೆಡ್‍ಗೆ ಬಾಗಿಲುಗಳನ್ನು ಅಳವಡಿಸಲು ಬಂದಿಲ್ಲ. ಈಗಾಗಲೇ ಶಾಶ್ವತ ಮನೆಗಳ ನಿರ್ಮಾಣ ಗೋಡೆ ಮಟ್ಟದಲ್ಲಿ ಬಂದು ಮುಂದಿನ ಎರಡು ತಿಂಗಳಲ್ಲಿ ಬ್ಯಾಡಗೊಟ್ಟ ಹಾಗೂ ಬಸವಹಳ್ಳಿ ಕೇಂದ್ರಗಳಲ್ಲಿ ಆಯಾ ನಿವಾಸಿಗಳಿಗೆ ವಾಸಿಸಲು ಮನೆಗಳನ್ನು ನೀಡುವ ಸಿದ್ಧತೆಗಳು ನಡೆಯುತ್ತಿದ್ದರೂ ತಾತ್ಕಾಲಿಕ ಶೆಡ್‍ಗೆ ಬಾಗಿಲುಗಳು ಇನ್ನೂ ಬಂದಿರುವದಿಲ್ಲ. ಬಾಗಿಲುಗಳನ್ನು ಭೂ ಸೇನಾ ನಿಗಮದವರು ಅಳವಡಿಸ ಬೇಕಿದೆ. ಬಾಗಿಲ ವ್ಯವಸ್ಥೆಯಿಲ್ಲದ ಕಾರಣ ಬಟ್ಟೆಯ ಸಹಾಯದಿಂದ ಮುಚ್ಚಲಾಗಿದೆ ಎಂದು ಅಲ್ಲಿನ ನಿವಾಸಿ ಗಳಾದ ಮಲ್ಲಪ್ಪ, ಭೋಜ, ಚಾಮಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅತಿ ಶೀಘ್ರವಾಗಿ ಹಾಡಿಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಸೋಲಾರ್ ದೀಪ ಮತ್ತು ಪಡಿತರ ಚೀಟಿಗಳನ್ನು ನೀಡುವದಾಗಿ ತಿಳಿಸಿದ ಸಮಾಜ ಕಲ್ಯಾಣ ಇಲಾಖೆಯವರು ಇದುವರೆಗೂ ಯಾವದೇ ಕ್ರಮ ಕೈಗೊಂಡಿಲ್ಲ. ಇದೀಗ ನೀಡುತ್ತಿರುವ ಮಾಸಿಕ ಪೌಷ್ಟಿಕ ಆಹಾರದ ಜೊತೆಯಲ್ಲಿ ಆಯಾಯಾ ಕುಟುಂಬದ ಪಡಿತರ ಚೀಟಿಗಳಿಗೆ ನೀಡುವ ಪಡಿತರ ವಸ್ತುಗಳನ್ನು ಪಡೆಯಲು ಇದುವರೆಗೂ ಯಾವದೇ ರೀತಿಯ ಕ್ರಮಕೈಗೊಂಡಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ