ಮಡಿಕೇರಿ, ನ. 29: ಹುತಾತ್ಮ ಸೈನಿಕರ ಮಕ್ಕಳಿಗೆ ಪದವಿ ಹಂತದಿಂದ ಸ್ನಾತಕೋತ್ತರ ಪದವಿ ತನಕ ಉಚಿತ ಶಿಕ್ಷಣ ಒದಗಿಸುವ ಮಹತ್ವದ ತೀರ್ಮಾನವೊಂದನ್ನು ಮೈಸೂರು ವಿಶ್ವವಿದ್ಯಾನಿಲಯ ಕೈಗೊಂಡಿದೆ. ಇತ್ತೀಚೆಗೆ ನಡೆದ ವಿಶ್ವವಿದ್ಯಾನಿಲಯದ ಅಕಾಡೆಮಿಕ್ ಕೌನ್ಸಿಲ್ ಸಭೆಯಲ್ಲಿ ಈ ತೀರ್ಮಾನಕ್ಕೆ ಒಪ್ಪಿಗೆ ದೊರೆತಿದೆ.
ಗುಜರಾತ್‍ನಲ್ಲಿ ಮೋದಿ ಸೈನ್ಸ್ ಅಂಡ್ ಟೆಕ್ನಾಲಜಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಕಾಶ್ಮೀರದ ಉರಿಯಲ್ಲಿ ಹುತಾತ್ಮರಾದ ಸೈನಿಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಇದರಂತೆ ರಾಜ್ಯದಲ್ಲೂ ವಿವಿಧ ವಿಶ್ವವಿದ್ಯಾನಿಲಯದಲ್ಲಿ ಉರಿಯಲ್ಲಿ ಹುತಾತ್ಮರಾದ ಸೈನಿಕರ ಮಕ್ಕಳಿಗೆ ಉಚಿತ ಶಿಕ್ಷಣ, ಊಟ, ವಸತಿ ನೀಡುವಂತೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವಂತೆ ಸರಕಾರದ ಪ್ರಧಾನ ಕಾರ್ಯದರ್ಶಿಗಳು ಎಲ್ಲಾ ವಿವಿಗಳಿಗೆ ಸೂಚನೆ ನೀಡಿದ್ದಾರೆ. ಇದರಂತೆ ಮೈಸೂರು ವಿವಿಯ ಪ್ರಬಾರ ಕುಲಪತಿ ಪ್ರೊ. ದಯಾನಂದಮಾನೆ ಅವರ ಅಧ್ಯಕ್ಷತೆಯಲ್ಲಿ ನಡೆದ ಅಕಾಡೆಮಿ ಕೌನ್ಸಿಲ್ ಸಭೆಯಲ್ಲಿ ಇದನ್ನು ಅಂಗೀಕರಿಸಲಾಗಿದೆ.
ಇದೇ ವಿಚಾರದಲ್ಲಿ ಮೈಸೂರು ವಿವಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಕೇವಲ ಉರಿ ಮಾತ್ರವಲ್ಲ ರಾಷ್ಟ್ರದ ಯಾವದೇ ಜಾಗದಲ್ಲೂ ಹುತಾತ್ಮರಾಗುವ ಸೈನಿಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ. ಈ ಕುರಿತು ಕೌನ್ಸಿಲ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಪ್ರಸ್ತಾವನೆಯನ್ನು ಮುಂದಿನ ಸಿಂಡಿಕೇಟ್ ಸಭೆಯಲ್ಲಿಟ್ಟು ಸರಕಾರದ ಅನುಮೋದನೆಗಾಗಿ ಕಳುಹಿಸಿಕೊಡಲಾಗುವದು ಎಂದು ವಿವಿಯ ಸಹಾಯಕ ಕುಲಸಚಿವರಾದ ರೇವಣ್ಣ ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.