ಗೋಣಿಕೊಪ್ಪ ವರದಿ, ನ. 29: ಬುಟ್ಟಿಯಂಡ ಜಿಮ್ಮಿ ಅಚ್ಚಪ್ಪ, ಅಶ್ವಿನಿ ಅಚ್ಚಪ್ಪ ಜ್ಞಾಪಕಾರ್ಥ ರಾಜ್ಯಮಟ್ಟದ ಅಂತರ್ ಕಾಲೇಜು ಹಾಕಿ ಟೂರ್ನಿಯಲ್ಲಿ ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಹಾಗೂ ವೀರಾಜಪೇಟೆ ಕಾವೇರಿ ಕಾಲೇಜು ತಂಡ ಫೈನಲ್ ಪ್ರವೇಶ ಪಡೆದಿವೆ.

ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಗೋಣಿಕೊಪ್ಪ ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಹಾಗೂ ಹಾಕಿಕೂರ್ಗ್ ಸಹಯೋಗದಲ್ಲಿ ನಡೆಯುತ್ತಿರುವ ಮಂಗಳೂರು, ಮೈಸೂರು ವಿಶ್ವವಿದ್ಯಾಲಯ ಮಟ್ಟದ 21 ವರ್ಷದೊಳಗಿನ ಬಾಲಕರ ಹಾಕಿ ಟೂರ್ನಿಯ ಸೆಮಿ ಫೈನಲ್‍ನಲ್ಲಿ ಉಭಯ ತಂಡಗಳು ಜಯ ಸಾಧಿಸಿದವು.

ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ತಂಡವು ವೀರಾಜಪೇಟೆ ಸೆಂಟ್ ಆನ್ಸ್ ವಿರುದ್ದ 2-0 ಗೋಲುಗಳ ಜಯ ಸಾಧಿಸುವ ಮೂಲಕ ಫೈನಲ್‍ಗೆ ಪ್ರವೇಶ ಪಡೆಯಿತು. ಕಾರ್ಯಪ್ಪ ತಂಡದ ಪರವಾಗಿ 3 ನೇ ನಿಮಿಷದಲ್ಲಿ ಪ್ರಸನ್ನ, 37 ರಲ್ಲಿ ಸುದೀಶ್ ತಲಾ ಒಂದೊಂದು ಗೋಲು ಹೊಡೆಯುವ ಮೂಲಕ ಗೆಲುವಿಗೆ ಕಾರಣರಾದರು. ಸೆಂಟ್ ಆನ್ಸ್ ಪರ ಗೋಲು ದಾಖಲಿಸಲು ಆಟಗಾರರು ವಿಫಲರಾದರು.

ವೀರಾಜಪೇಟೆ ಕಾವೇರಿ ಕಾಲೇಜು ತಂಡವು ಗೋಣಿಕೊಪ್ಪ ಕಾವೇರಿ ಕಾಲೇಜು ತಂಡವನ್ನು 1-0 ಗೋಲುಗಳಿಂದ ಮಣಿಸಿತು. ವೀರಾಜಪೇಟೆ ಪರವಾಗಿ 19 ನೇ ನಿಮಿಷದಲ್ಲಿ ಬೋಪಣ್ಣ ಗೋಲು ಹೊಡೆದರು.

ಟೂರ್ನಿ ನಿರ್ದೇಶಕರಾಗಿ ಕೋಡಿಮಣಿಯಂಡ ಗಣಪತಿ, ತಾಂತ್ರಿಕ ವರ್ಗದಲ್ಲಿ ಕುಪ್ಪಂಡ ಸುಬ್ಬಯ್ಯ, ಕಾರ್ತಿಕ್, ಮೇರಿಯಂಡ ಅಯ್ಯಣ್ಣ, ಚೋಯಮಾಡಂಡ ಗಣಪತಿ, ಕರವಂಡ ಅಪ್ಪಣ್ಣ, ಮೂಕಚಂಡ ನಾಚಪ್ಪ, ಹಾಗೂ ಹರಿಣಾಕ್ಷಿ ಕಾರ್ಯನಿರ್ವಹಿಸಿದರು.