ಶ್ರೀಮಂಗಲ, ನ. 29 : ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರಹಿಸಿ 29ನೇ ದಿನದ ಧರಣಿ ಸತ್ಯಾಗ್ರಹದಲ್ಲಿ ಮತ್ತೂರು, ಕೋಟೂರು, ಕಿರುಗೂರು ಗ್ರಾಮಸ್ಥರು, ಶ್ರೀಮಂಗಲ ನಾಡು ಕೊಡವ ಸಮಾಜ, ನಾಗರಹೊಳೆಯ ಬುಡಕಟ್ಟು ಕೃಷಿಕರ ಸಂಘದ ಪದಾಧಿಕಾರಿಗಳು ಭಾಗವಹಿಸುವ ಮೂಲಕ ಬೆಂಬಲವನ್ನು ವ್ಯಕ್ತಪಡಿಸಿದರು.
ಈ ಸಂದರ್ಭ ಶ್ರೀಮಂಗಲ ನಾಡು ಕೊಡವ ಸಮಾಜದ ಪರವಾಗಿ ಮಾತನಾಡಿದ ಕಾಫಿ ಮಂಡಳಿಯ ಸದಸ್ಯ ಮಚ್ಚಮಾಡ ಡಾಲಿ ಚಂಗಪ್ಪನವರು ಪೊನ್ನಂಪೇಟೆ ತಾಲೂಕು ರಚನೆ ಅತ್ಯಂತ ಅವಶ್ಯಕತೆ ಇರುವ ಬೇಡಿಕೆ ಇದೆ. ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ತಾಲೂಕು ಘೋಷಿಸಬೇಕು ಎಂದು ಆಗ್ರಹಿಸಿದರು.
ಹಿರಿಯರಾದ ಕೊದೇಂಗಡ ಕಾರ್ಯಪ್ಪ ಅವರು ಮಾತನಾಡಿ ಸ್ವತಂತ್ರ್ಯ ಪೂರ್ವದಲ್ಲಿ ಪೊನ್ನಂಪೇಟೆ ತಾಲೂಕಾಗಿತ್ತು. ಆದ್ದರಿಂದಲೇ ಪೊನ್ನಂಪೇಟೆÉ ಕೇಂದ್ರದಲ್ಲಿ ಬಹಳಷ್ಟು ಇಲಾಖೆಯ ತಾಲೂಕು ಕೇಂದ್ರಗಳು ಇವೆ. ಆದ್ದರಿಂದ ಈ ಬೇಡಿಕೆಯನ್ನು ಸರ್ಕಾರ ಜನಪರ ಕಾರ್ಯಕ್ರಮವೆಂದು ಪರಿಗಣಿಸಿ ಕೂಡಲೇ ಈಡೇರಿಸಬೇಕೆಂದು ಹೇಳಿದರು.
ಕಾಟಿಮಾಡ ಜಿಮ್ಮಿ ಅಣ್ಣಯ್ಯ ಮಾತನಾಡಿ ತಾಲೂಕು ರಚನೆ ಯಾಗುವವರೆಗೆ ರಾಜಕೀಯ ರಹಿತವಾಗಿ ಹೋರಾಟ ನಡೆಸುವ ಅಗತ್ಯತೆಯ ಬಗ್ಗೆ ಸಲಹೆ ನೀಡಿ ತಾಲೂಕು ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಪೊನ್ನಂಪೇಟೆ ನಾಗರಿಕ ಸಮಿತಿಯ ಉಪಾಧ್ಯಕ್ಷ ಚೆಪ್ಪುಡೀರ ಸೋಮಯ್ಯ ಮಾತನಾಡಿ ತಾಲೂಕು ರಚನೆಗೆ 42 ಮಾನದಂಡದಂತೆ ಎಲ್ಲವೂ ಇದೆ. ಸರ್ಕಾರಗಳು ಕೊಡಗಿನ ಜನಕ್ಕೆ ಕೇರಳದ ಮಾರಕ ಯೋಜನೆಗಳನ್ನು ನೀಡಲು ಉತ್ಸುಕವಾಗಿದೆ. ಹೈಟೆನ್ಷನ್ ವಿದ್ಯುತ್ ಮಾರ್ಗ, ಕೊಡಗನ್ನು ಇಬ್ಬಾಗಿಸಿ ಕೇರಳಕ್ಕೆ ಸಂಪರ್ಕಿಸುವ ರೈಲ್ವೆ ಮಾರ್ಗ ಕೊಡಗಿನ ಜನರ ಬೇಡಿಕೆಯಾಗಿರಲಿಲ್ಲ ಎಂದ ಅವರು ತಾಲೂಕು ಘೋಷಣೆ ಮಾಡಿದರೆ ಸಾಕು. ಎಲ್ಲಾ ಅವಶ್ಯವಾದ ಇಲಾಖಾ ಕೇಂದ್ರಗಳು ಪೊನ್ನಂಪೇಟೆ ಯಲ್ಲಿದೆ ಎಂದು ಹೇಳಿದರು.
ಚಿರಿಯಪಂಡ ಕಾಶಿಯಪ್ಪ ಮಾತನಾಡಿ ಆಡಳಿತ ಪಕ್ಷದ ಪ್ರತಿನಿಧಿಗಳು ಮುಖ್ಯಮಂತ್ರಿಗಳ ಗಮನ ಸೆಳೆಯುವ ಕೆಲಸವಾಗಬೇಕು. ಈ ತಾಲೂಕ್ಕಿಗಾಗಿ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಜೆ.ಕೆ.ತಿಮ್ಮ ಮಾತನಾಡಿ ದೂರದ ವೀರಾಜಪೇಟೆ ತಾಲ್ಲೂಕು ಕೇಂದ್ರಕ್ಕೆ ತೆರಳುವದು ಹಾಗೂ ಅಲ್ಲಿ ಕೆಲಸವಾಗಿ ವಾಪಾಸ್ಸು ಹಿಂದಿರುಗು ವಾಗ ರಾತ್ರಿಯಾಗುತ್ತದೆ. ಆದ್ದರಿಂದ ಎಲ್ಲಾ ಅರ್ಹತೆ ಇರುವ ಪೊನ್ನಂಪೇಟೆ ತಾಲೂಕು ರಚನೆಗೆ ಮಾನ್ಯತೆ ನೀಡಬೇಕೆಂದು ಹೇಳಿದರು.
ತಾ.ಪಂ ಮಾಜಿ ಸದಸ್ಯ ರಘು ಮಾತನಾಡಿ ಗಿರಿಜನರಿಗೆ ಸಂಬಂಧಪಟ್ಟ ಇಲಾಖೆ ಪೊನ್ನಂಪೇಟೆ ಯಲ್ಲಿದೆ. ವೀರಾಜಪೇಟೆಯಲ್ಲಿ ಮಿನಿ ವಿಧಾನಸೌಧ ಆದರೆ ಅಲ್ಲಿಗೆ ಪೊನ್ನಂಪೇಟೆಯಲ್ಲಿರುವ ಎಲ್ಲಾ ತಾಲೂಕು ಕೇಂದ್ರಗಳು ಸ್ಥಳಾಂತರ ವಾಗಲಿದ್ದು ಇದರಿಂದ ದ.ಕೊಡಗಿನ ಜನರಿಗೆ ಮತ್ತಷ್ಟು ತೊಂದರೆ ಉಂಟಾಗಲಿದೆ ಎಂದು ಹೇಳಿದರು.
ತಾ.ಪಂ ಮಾಜಿ ಉಪಾಧ್ಯಕ್ಷ ಕೋಳೆರ ದಯಾ ಚಂಗಪ್ಪ ಮಾತನಾಡಿ ಪೊನ್ನಂಪೇಟೆಯ ಹಿರಿಯರು ವಿಶ್ರಾಂತವಾಗಿರುವ ಸಮಯದಲ್ಲಿ ತಮ್ಮ ನೇತೃತ್ವದಲ್ಲಿ ತಾಲೂಕು ರಚನೆ ಹೋರಾಟವನ್ನು ಕ್ರೀಯಾಶೀಲವಾಗಿ ಮಾಡಿದ್ದಾರೆ. ಈಗಾಗಲೇ ಶಾಸಕ ಕೆ.ಜಿ.ಬೋಪಯ್ಯನವರು ವಿಧಾನ ಸಭೆಯಲ್ಲಿ ವೀರಾಜಪೇಟೆಯ ಮಿನಿ ವಿಧಾನ ಸೌಧ ಕಾಮಗಾರಿ ವಿಳಂಬವಾಗುತ್ತಿದ್ದು ಶೀಘ್ರದಲ್ಲಿ ಕಾಮಗಾರಿ ಮುಗಿಸಿ ಜನರ ಉಪಯೋಗಕ್ಕೆ ಹಸ್ತಾಂತರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ಧಾರೆ. ಇನ್ನೂ ಕೆಲವೇ ಸಮಯದಲ್ಲಿ ಮಿನಿ ವಿಧಾನ ಸೌಧ ಕಾಮಗಾರಿ ಮುಗಿಯಲಿದ್ದು, ಮಿನಿ ವಿಧಾನ ಸೌಧದಲ್ಲಿ ಎಲ್ಲ ತಾಲ್ಲೂಕು ಕೇಂದ್ರಗಳು ಇರಬೇಕೆನ್ನುವದು ನಿಯಮ. ಹಾಗಾದಲ್ಲಿ ಪೊನ್ನಂಪೇಟೆಯಲ್ಲಿ ಈಗಾಗಲೇ ಇರುವ ಬಹಳಷ್ಟು ತಾಲೂಕು ಕೇಂದ್ರಗಳು ವೀರಾಜಪೇಟೆ ಮಿನಿ ವಿಧಾನಸೌಧ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ. ಹೀಗೆ ಸ್ಥಳಾಂತರವಾದಲ್ಲಿ ಈ ಭಾಗದ ಜನರಿಗೆ ಹೆಚ್ಚಿನ ತೊಂದರೆಯಾಗಲಿದೆ. ಆದ್ದರಿಂದ ಸ್ಥಳಾಂತರವಾಗುವ ಮೊದಲೇ ಎಚ್ಚೆತ್ತುಕೊಂಡು ತಾಲೂಕು ಹೋರಾಟವನ್ನು ತೀವ್ರಗೊಳಿಸಿ ತಾಲೂಕು ರಚನೆ ಮಾಡಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭ ತಾಲೂಕು ಹೋರಾಟ ಸಮಿತಿಯ ಸಂಚಾಲಕ ಮಾಚಿಮಾಡ ರವೀಂದ್ರ, ಶ್ರೀಮಂಗಲನಾಡು ಕೊಡವ ಸಮಾಜದ ಅಧ್ಯಕ್ಷ ಚೋನಿರ ರತನ್ ಕುಮಾರ್, ಕಾರ್ಯದರ್ಶಿ ಮಚ್ಚಮಾಡ ವಿಜಯ್, ಪದಾಧಿಕಾರಿಗಳಾದ ಎಂ.ಟಿ.ಕಾರ್ಯಪ್ಪ, ಕೊಣೇರಿರ ಬೋಪಣ್ಣ, ಅಯ್ಯಮಾಡ ಉದಯ, ಎಂ.ಜಿ.ಮಿಲನ್ ಮುದ್ದಯ್ಯ, ಮಾಣೀರ ಉಮೇಶ್, ಅಜ್ಜಮಾಡ ಬೋಪಣ್ಣ, ಕಟ್ಟೇರ ಜಾಜಿ ಉತ್ತಪ್ಪ, ಎಂ.ಎಂ.ಸುಮನ್, ಪಿ.ಎನ್. ಕುಶಾಲಪ್ಪ, ಕಟ್ಟೇರ ಜನಕ, ಜಿಲ್ಲಾ ಪದಾರ್ಥಿ ಸಮಾಜದ ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಮುಕುಂದ, ಕಿರುಗೂರು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಅಲೇಮಾಡ ಸುಧಿ, ಬುಡಕಟ್ಟು ಕೃಷಿಕರ ಸಂಘದ ಜೆ.ಬಿ.ಮನು, ಜೆ.ಎಸ್. ರಾಮಕೃಷ್ಣ, ಜೆ.ಕೆ.ಕಾಳ, ಶಾಂತಿ, ಚೆಪ್ಪುಡೀರ ವಿವೇಕ್, ಮದ್ರಿರ ಸೋಮಯ್ಯ, ಪೊನ್ನಂಪೇಟೆ ಜಮಾಅತ್ನ ಕಾರ್ಯದರ್ಶಿ ಮಮತಾಜ್ ಭಾಗ್ಷ ಹಾಗೂ ಪೊನ್ನಂಪೇಟೆ ಹಿರಿಯ ನಾಗರಿಕ ವೇದಿಕೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು. ಪೊನ್ನಂಪೇಟೆಯ ಉಪ ತಹಶೀಲ್ದಾರ್ ಶಶಿಧರ್ರವರಿಗೆ ಸತ್ಯಾಗ್ರಹ ನಿರತರು ಮನವಿ ಪತ್ರ ಸಲ್ಲಿಸಿದರು.
ತಾ. 30ಕ್ಕೆ(ಇಂದು) ಶ್ರೀಮಂಗಲ ಛೇಂಬರ್ ಆಫ್ ಕಾರ್ಮಸ್ ಮತ್ತು ಶ್ರೀಮಂಗಲ ನಾಡಿನ ಗ್ರಾಮಸ್ಥರು ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಕೊಡವ ತಕ್ಕ್ ಎಳ್ತ್ಕಾರಡ ಕೂಟ ಬೆಂಬಲ
ಪೊನ್ನಂಪೇಟೆ ತಾಲೂಕು ಪುನರ್ರಚನಾ ಸಮಿತಿಗೆ ಜಿಲ್ಲೆಯ ಸಾಹಿತ್ಯ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆಯಾದ ‘ಕೊಡವ ತಕ್ಕ್ ಎಳ್ತ್ಕಾರಡ ಕೂಟ’ವು ಸಂಪೂರ್ಣ ಬೆಂಬಲ ಘೋಷಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಪೊನ್ನಂಪೇಟೆಯನ್ನು ತಾಲ್ಲೂಕು ಕೇಂದ್ರವಾಗಿ ಮಾಡಿದರೆ ಈ ಭಾಗದ ಜನರಿಗೆ ಕಂದಾಯ ಇಲಾಖೆಯು ಸೇರಿದಂತೆ ವಿವಿಧ ಇಲಾಖೆಯ ಸೌಕರ್ಯ ಪಡೆಯಲು ಸುಲಭ ಸಾಧ್ಯವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಭಾಗದಲ್ಲಿ ಕೊಡವ ಭಾಷೆ, ಸಾಹಿತ್ಯ, ಕಲೆ, ಸಂಸ್ಕøತಿಯ ಉಳಿಕೆ ಬೆಳವಣಿಕೆಗೆ ಆಡಳಿತಾತ್ಮಕವಾಗಿ ಸಹಕಾರ ಹಾಗೂ ಹೆಚ್ಚಿನ ಮಾನ್ಯತೆ ಸಿಗಲಿದೆ. ತಾಲೂಕು ಮಟ್ಟದ ಮೇಳ, ಸಮಾರಂಭ, ಶಿಬಿರಗಳ ಪ್ರಯೋಜನವನ್ನು ಅತೀ ಹೆಚ್ಚು ಜನರು ಪಡೆದುಕೊಳ್ಳಲು ಪ್ರಯೋಜನ ವಾಗಲಿದೆ. ಭಾಷೆ, ಸಾಹಿತ್ಯ, ಕಲೆ, ಜಾನಪದಗಳ ದಾಖಲೀಕರಣಕ್ಕೆ ಆಡಳಿತ ವ್ಯವಸ್ಥೆ ಹತ್ತಿರ ವಾದಂತಾಗುತ್ತದೆ ಎಂದಿದ್ದಾರೆ.