ಸೋಮವಾರಪೇಟೆ,ನ.29: ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಯಡಿ ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ.5.99 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಯಡವನಾಡು-ಕಾಜೂರು ಸಂಪರ್ಕ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂಬ ದೂರಿನ ಮೇರೆಗೆ ರಾಜ್ಯ ಗುಣಮಟ್ಟ ನಿಯಂತ್ರಣಾಧಿಕಾರಿ ವೆಂಟಕೇಶ್‍ರವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. 5.99 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ರಸ್ತೆ ಕಾಮಗಾರಿ ಕಳಪೆಯಾಗಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಮಾಹಿತಿ ಹಕ್ಕು ಕಾರ್ಯಕರ್ತ ಬಗ್ಗನ ಅನಿಲ್‍ಕುಮಾರ್ ಅವರು ದೂರು ನೀಡಿದ್ದರು. ಈ ದೂರಿನ ಮೇಲೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.

ಯಡವನಾಡು-ಕಾಜೂರು ಸಂಪರ್ಕಿಸುವ 6ಕಿ.ಮೀ ಉದ್ದದ ರಸ್ತೆ ಕಾಮಗಾರಿಗೆ ರೂ.5ಕೋಟಿ 63ಲಕ್ಷ ಬಿಡುಗಡೆಯಾಗಿತ್ತು. ಕುಶಾಲನಗರದ ದಿನೇಶ್ ಎಂಬವರು ನಿರ್ಮಿಸಿದ ಕಾಮಗಾರಿಯು ಕಳಪೆಯಾಗಿದೆ ಎಂದು ಆರೋಪಿಸಿ ಆರ್‍ಟಿಐ ಕಾರ್ಯಕರ್ತ ಅನಿಲ್‍ಕುಮಾರ್ ಅವರು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯಾಚರಣಾ ಅಧಿಕಾರಿಗಳಿಗೆ ಸೆಪ್ಟಂಬರ್ 8ರಂದು ದೂರು ಸಲ್ಲಿಸಿದ್ದರು.

ಅಧಿಕಾರಿಗಳು ಯಾವದೇ ಕ್ರಮಕ್ಕೆ ಮುಂದಾಗದ ಹಿನ್ನೆಲೆ ಮಡಿಕೇರಿಯ ಪಿಎಂಜಿಎಸ್‍ವೈ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಆದರೆ, ಇದುವರೆಗೆ ಅಧಿಕಾರಿಗಳು ಯಾವದೇ ಸೂಕ್ತ ಕ್ರಮ ತೆಗೆದುಕೊಳ್ಳದ ಹಿನ್ನೆಲೆ ರಾಜ್ಯ ಗುಣಮಟ್ಟ ನಿಯಂತ್ರಣಾಧಿಕಾರಿ ಗಳ ಕಚೇರಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ರಾಜ್ಯ ಗುಣಮಟ್ಟ ನಿಯಂತ್ರಣಾಧಿಕಾರಿ ಹಾಗೂ ಅಭಿಯಂತರರ ತಂಡ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಗೆ ಬಳಸಿದ ಕಲ್ಲು, ಮರಳು ಮತ್ತು ಡಾಮರಿನ ಗುಣಮಟ್ಟ ಹಾಗೂ ಸಾಮಗ್ರಿಗಳನ್ನು ಬಳಸಿದ ಪ್ರಮಾಣವನ್ನು ಪರಿಶೀಲಿಸಿತು.

ಕಾಮಗಾರಿಯನ್ನು ಪರಿಶೀಲಿಸಿದ ಅಭಿಯಂತರ ವೆಂಕಟೇಶ್ ಮಾತನಾಡಿ, ಯಡವನಾಡು, ಕಾಜೂರು ರಸ್ತೆ ಕಳಪೆಯಾಗಿರುವ ಕುರಿತು ಆರ್‍ಟಿಐ ಕಾರ್ಯಕರ್ತರು ದೂರು ನೀಡಿದ ಹಿನ್ನೆಲೆ ಈಗಾಗಲೇ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಲಾಗಿದೆ. ಮೇಲ್ನೋಟಕ್ಕೆ ಕಾಮಗಾರಿ ಸಮರ್ಪಕವಾಗಿಲ್ಲ. ಕಾಮಗಾರಿಯ ಕುರಿತು ಸಂಪೂರ್ಣ ವರದಿಯನ್ನು ಮುಖ್ಯ ಅಧೀಕ್ಷಕ ಅಭಿಯಂತರರಿಗೆ ನೀಡಲಾಗುವದು. ಉಳಿದ ಕಾಮಗಾರಿ ಯನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಸ್.ಚಂಗಪ್ಪ, ಆರ್‍ಟಿಐ ಕಾರ್ಯಕರ್ತ ಬಗ್ಗನ ಅನಿಲ್, ಬಗ್ಗನ ಹರೀಶ್, ಐಗೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಪಿ.ರಾಯ್ ಹಾಗೂ ಸದಸ್ಯರು, ಗ್ರಾಮಸ್ಥರಾದ ಮಚ್ಚಂಡ ಪ್ರಕಾಶ್, ರಾಮಪ್ಪ, ಮಚ್ಚಂಡ ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.