ಸೋಮವಾರಪೇಟೆ, ನ. 29: ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮಾರುಕಟ್ಟೆಯ ಬಳಿ ಬಯಲು ಶೌಚಾಲಯ ನಿರ್ಮಾಣವಾಗಿದೆ.
ಮಾರುಕಟ್ಟೆ ಸೇರಿದಂತೆ ಪಟ್ಟಣಕ್ಕೆ ಆಗಮಿಸುವ ಕೆಲ ಸಾರ್ವಜನಿಕರು ಈ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವದರಿಂದ ಇಡೀ ಆವರಣ ಗಬ್ಬೆದ್ದು ನಾರುತ್ತಿದೆ.
ಕ್ಲಬ್ ರಸ್ತೆಯಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಯಲ್ಲಿ ಶೌಚಾಲಯ ನಿರ್ಮಾಣಕ್ಕೆಂದು ಯೋಜನೆ ರೂಪಿಸ ಲಾಗಿದ್ದರೂ ಇದು ವರೆಗೂ ಕಾರ್ಯ ರೂಪಕ್ಕೆ ತಾರದೇ ಇರುವದ ರಿಂದ ಆವರಣ ದುರ್ನಾತ ಬೀರುತ್ತಿದೆ.
ಸಂತೆ ದಿನವಾದ ಸೋಮವಾರದಂದು ಮಾರುಕಟ್ಟೆಗೆ ಆಗಮಿಸುವ ವ್ಯಾಪಾರಸ್ಥರು ಇದೇ ಸ್ಥಳವನ್ನು ಶೌಚಾಲಯದ ರೀತಿ ಬಳಸಿಕೊಳ್ಳುತ್ತಿದ್ದಾರೆ. ವಾಣಿಜ್ಯ ಕಟ್ಟಡದ ಹಿಂಭಾಗ ದಲ್ಲಿರುವ ಈ ಸ್ಥಳದ ಪಕ್ಕದಲ್ಲೇ ಸೋಮವಾರದಂದು ವ್ಯಾಪಾರ ವಹಿವಾಟು ಮಾಡಬೇಕಿದೆ. ಪಟ್ಟಣಕ್ಕೆ ಆಗಮಿಸುವ ಸಾರ್ವಜನಿಕರ ಉಪಯೋಗಕ್ಕಾಗಿ ಇಲ್ಲಿನ ಖಾಸಗಿ ಬಸ್ ನಿಲ್ದಾಣ ಮತ್ತು ಸಿ.ಕೆ. ಸುಬ್ಬಯ್ಯ ರಸ್ತೆಯ ವಾಣಿಜ್ಯ ಮಳಿಗೆಯ ಹಿಂಭಾಗ ಪ.ಪಂ.ನಿಂದ ಶೌಚಾಲಯ ನಿರ್ಮಿಸಲಾಗಿದೆ. ಇಲ್ಲಿಗೆ ತೆರಳುವಷ್ಟು ವ್ಯವಧಾನ ಇಲ್ಲದ ಸಾರ್ವಜನಿಕರು ಮಾರುಕಟ್ಟೆಯ ಬಳಿಯಲ್ಲಿಯೇ ಇರುವ ಈ ಖಾಲಿ ಮಳಿಗೆಯನ್ನೇ ಶೌಚಾಲಯವನ್ನಾಗಿಸಿಕೊಂಡಿದ್ದಾರೆ.
ಪಟ್ಟಣ ಪಂಚಾಯಿತಿ ಈ ಬಗ್ಗೆ ತಕ್ಷಣ ಗಮನ ಹರಿಸಬೇಕಿದೆ. ಈ ಸ್ಥಳದಲ್ಲಿ ಶೌಚಾಲಯ ನಿರ್ಮಿಸುವದು ಅಥವಾ ಬಯಲು ಮೂತ್ರ ವಿಸರ್ಜನೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕಿದೆ.