ವೀರಾಜಪೇಟೆ, ನ. 30: ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಶಿಸ್ತು ಮತ್ತು ಛಲದಿಂದ ಶಿಕ್ಷಣದ ಕಡೆಗೆ ಗಮನ ಹರಿಸಿ ತಮ್ಮ ಜೀವನವನ್ನು ರೂಪಿಸಿಕೊಳ್ಳು ವಂತಾಗಬೇಕು ಎಂದು ವೀರಾಜಪೇಟೆ ವೃತ್ತ ಪೊಲೀಸ್ ನಿರೀಕ್ಷಕ ಎನ್. ಕುಮಾರ್ ಆರಾಧ್ಯ ಹೇಳಿದ್ದಾರೆ.

ನಗರದ ಮಲಬಾರ್ ರಸ್ತೆಯ ಮೀನುಪೇಟೆಯಲ್ಲಿರುವ ಸಲಫಿ ಜುಮಾ ಮಸೀದಿಯ ಸಭಾಂಗಣದಲ್ಲಿ ಜಿಲ್ಲಾ ಎಂ.ಎಸ್.ಎಂ. ವತಿಯಿಂದ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಆಧುನಿಕ ಸಾಮಾಜಿಕ ಜಾಲತಾಣಗಳನ್ನು ಸಕಾರಾತ್ಮಕ ಕಾರ್ಯಗಳಿಗೆ ಮಾತ್ರ ಬಳಸಬೇಕು. ಯಾವದೇ ಧರ್ಮಗಳಿಗೆ ಅವಹೇಳನ ಮಾಡಬಾರದು. ಪೋಷಕರು ಮಕ್ಕಳನ್ನು ಶಾಲಾ- ಕಾಲೇಜುಗಳಿಗೆ ಕಳುಹಿಸುವ ಉದ್ದೇಶವನ್ನು ವಿದ್ಯಾರ್ಥಿಗಳು ಮನದಲ್ಲಿಟ್ಟುಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳು ವಂತಾಗಬೇಕು. ಯಾವದೇ ಕಾರಣಕ್ಕೂ ಮಾದಕ ವಸ್ತುಗಳಿಗೆ ಬಲಿಯಾಗದೆ ಉತ್ತಮ ನಾಗರಿಕತೆಯನ್ನು ಬೆಳಸಿಕೊಳ್ಳುವದರೊಂದಿಗೆ ಸಮಾಜಕ್ಕೆ ಉತ್ತಮ ವ್ಯಕ್ತ್ತಿಯಾಗಿ ದೇಶಕ್ಕೂ ಉತ್ತಮ ಪ್ರಜೆಗಳಾಗಬೇಕು ಎಂದರು.

ಅತಿಥಿಯಾಗಿ ಆಗಮಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ ಮಾತನಾಡಿ, ವಿದ್ಯಾರ್ಥಿ ಜೀವನ ಮಹತ್ವವಾದದ್ದು. ಜೀವನದಲ್ಲಿ ಛಲದಿಂದ ಸಾಧನೆ ಮಾಡಿ ಗುರಿ ಮುಟ್ಟುವಂತಾಗಬೇಕು. ಗುರು-ಹಿರಿಯರಿಗೆ ಗೌರವ ನೀಡುವ ಮೂಲಕ ತಮ್ಮ ಜೀವನವನ್ನು ರೂಪಿಸಿ ಕೊಳ್ಳುವಂತೆ ಶುಭ ಹಾರೈಸಿದರು. ಜೆ.ಡಿ.ಎಸ್. ಪಕ್ಷದ ವೀರಾಜಪೇಟೆ ವಿಧಾನಸಭಾ ಕ್ಷೇತ್ರಾಧ್ಯಕ್ಷ ಪಟ್ಟಣ ಪಂಚಾಯಿತಿ ಸದಸ್ಯ ಎಸ್.ಹೆಚ್. ಮತೀನ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ ಪಡೆದ ಬಳಿಕ ಹೊರದೇಶಗಳ ವೃತ್ತಿಯ ಕಡೆಗೆ ಗಮನಹರಿಸದೆ ಪಡೆದ ವಿದ್ಯೆಯನ್ನು ದೇಶ ಸೇವೆಗೆ ಮುಡಿಪಾಗಿಡಬೇಕು. ಯುವ ಶಕ್ತಿಯೇ ದೇಶದ ಶಕ್ತಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಲಫಿ ಜುಮಾ ಮಸೀದಿಯ ಅಧ್ಯಕ್ಷ ಸಿ.ಎ. ಯುನಸ್ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಸುಂಟಿಕೊಪ್ಪದ ಸಲಫಿ ಮಸೀದಿಯ ಅಧ್ಯಕ್ಷ ಎಂ.ಅಬ್ದುಲ್ಲ, ಕಾರ್ಯದರ್ಶಿ ಸಮೀರ್, ಎನ್.ಕೆ. ಶರೀಫ್ ಹಾಗೂ ವಿದ್ಯಾರ್ಥಿಗಳ ಪೋಷಕರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.