ಸೋಮವಾರಪೇಟೆ, ನ. 30: ಆಯಾ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿಯೇ ಮುಂದಿನ ಚುನಾವಣೆಗೆ ಪಕ್ಷ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಮತ್ತೊಮ್ಮೆ ಕಾಂಗ್ರೆಸ್‍ಅನ್ನು ಅಧಿಕಾರಕ್ಕೆ ತರಬೇಕೆಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹೇಳಿದರು.

ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಮೀಪದ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಶಾಂತಳ್ಳಿ, ಬೆಟ್ಟದಳ್ಳಿ, ತೋಳೂರುಶೆಟ್ಟಳ್ಳಿ, ಹಾನಗಲ್ಲು, ಕಿರಗಂದೂರು ಮತ್ತು ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಗಳನ್ನು ಆಯ್ಕೆಮಾಡಲಾಗುವದು. ಯಾರೇ ಅಭ್ಯರ್ಥಿಯಾದರೂ ಅವರ ಗೆಲುವಿಗೆ ಇತರ ನಾಯಕರು ಮತ್ತು ಕಾರ್ಯಕರ್ತರು ಶ್ರಮವಹಿಸಬೇಕು ಎಂದು ವೀಣಾ ಅಚ್ಚಯ್ಯ ಕರೆ ನೀಡಿದರು.

ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಮನೆ ಮನೆಗೆ ಕಾಂಗ್ರೆಸ್ ಅಭಿಯಾನದಿಂದ ಮತದಾರರ ಮನಪರಿವರ್ತನೆ ಯಾಗುತ್ತಿದೆ. ಇದಕ್ಕೆ ಇನ್ನಷ್ಟು ವೇಗ ನೀಡಬೇಕು. ಅಭ್ಯರ್ಥಿ ಯಾರೇ ಆದರೂ ಪಕ್ಷವನ್ನು ಗೆಲ್ಲಿಸಬೇಕು ಎಂದರು. ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಮಾತನಾಡಿ, ಚುನಾವಣೆ ಸಮೀಪಿಸಿದಾಗ ಮಾತ್ರ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕ್ರಿಯಾಶೀಲ ವಾಗುತ್ತವೆ. ಆದರೆ ಕಾಂಗ್ರೆಸ್ ನಿರಂತರವಾಗಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದೆ. ರೈತರು ಮತ್ತು ಬಡವರ ಮನೆಗೆ ಕಾಂಗ್ರೆಸ್ ಸರ್ಕಾರದ ಯೋಜನೆಗಳು ಮುಟ್ಟಿವೆ.

ಕೊಡಗಿನಲ್ಲಿ ಕಳೆದ ಎರಡು ದಶಕಗಳಿಂದ ಬಿಜೆಪಿ ಶಾಸಕರಿದ್ದು, ಇದೀಗ ಇವರುಗಳ ವಿರುದ್ಧವಾಗಿ ಅಭಿಪ್ರಾಯ ವ್ಯಕ್ತಗೊಳ್ಳುತ್ತಿವೆ ಎಂದರು.

ಪಕ್ಷದ ಜಿಲ್ಲಾಧ್ಯಕ್ಷ ಶಿವು ಮಾದಪ್ಪ ಮಾತನಾಡಿ, ಕೊಡಗಿನ ಪ್ರತಿ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಸದೃಢವಾಗಿದೆ. ಎರಡೂ ಕ್ಷೇತ್ರದಲ್ಲಿ ಬದಲಾವಣೆ ಬೇಕೆಂಬ ಆಶಯ ಮತದಾರರಲ್ಲಿದೆ. ನಾಯಕರುಗಳು ಒಂದಾದರೆ ಬಿಜೆಪಿ ಎಂಎಲ್‍ಎಗಳನ್ನು ಎದುರಿಸುವದು ಕಷ್ಟವಲ್ಲ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ಚುನಾವಣೆಗೆ ಮೂರು ತಿಂಗಳು ಮುಂಚಿತವಾಗಿ ಅಭ್ಯರ್ಥಿಯ ಆಯ್ಕೆ ಮಾಡಲು ವರಿಷ್ಠರು ಕ್ರಮ ಕೈಗೊಳ್ಳಬೇಕೆಂದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಚಂಗಪ್ಪ ಮಾತನಾಡಿ, ದೆಹಲಿ, ಚೆನ್ನೈ, ಬೆಂಗಳೂರಿನಿಂದ ಟಿಕೇಟ್ ತರುತ್ತೇವೆ ಎಂದು ಕೆಲವರು ಹೇಳಿಕೊಂಡು ತಿರುಗುತ್ತಿದ್ದಾರೆ. ಇಂತವರಿಗೆ ಪಕ್ಷದಲ್ಲಿ ಮಣೆಹಾಕಬಾರದು ಎಂದರು.

ಪಕ್ಷದ ಹಿರಿಯ ಮುಖಂಡ ಬಗ್ಗನ ತಮ್ಮಯ್ಯ ಮಾತನಾಡಿ, ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಕೆಲಸಕಾರ್ಯಗಳು ಆಗುತ್ತಿಲ್ಲ. ಈ ಬಗ್ಗೆ ಸರ್ಕಾರದ ಗಮನಸೆಳೆಯಬೇಕು ಎಂದು ಆಗ್ರಹಿಸಿದರು. ಹಿರಿಯ ಕಾಂಗ್ರೆಸ್ಸಿಗರನ್ನು ಗಣನೆಗೆ ತೆಗೆದು ಕೊಂಡು ಪಕ್ಷ ಸಂಘಟನೆ ಮಾಡಬೇಕು ಎಂದು ಬಸಪ್ಪ ಸಲಹೆ ನೀಡಿದರು.

ಪಕ್ಷದ ಜಿಲ್ಲಾ ಉಪಾಧ್ಯಕ್ಷ ನಂದಕುಮಾರ್, ಜಿ.ಪಂ. ಸದಸ್ಯೆ ಕುಮುದಾ ಧರ್ಮಪ್ಪ ಅವರುಗಳು ಮಾತನಾಡಿದರು. ವೇದಿಕೆಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ, ಕಾಂಗ್ರೆಸ್ ಮುಖಂಡರಾದ ಕೊಲ್ಯದ ಗಿರೀಶ್, ಚಿಣ್ಣಪ್ಪ, ಬಿ.ಬಿ. ಸತೀಶ್, ಅನಂತ್ ಕುಮಾರ್, ಮಿಥುನ್, ರವೀಂದ್ರ, ಮಂಜುಳಾ, ಟಿ.ಈ. ಸುರೇಶ್, ವಿ.ಎ. ಲಾರೆನ್ಸ್, ಪೂವಮ್ಮ, ಚೇತನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.