ಸುಂಟಿಕೊಪ್ಪ, ನ.29: ಮಾದಾಪುರ ಇಗ್ಗೋಡ್ಲುವಿನಲ್ಲಿ ಕೆಲ ತಿಂಗಳ ಹಿಂದೆ ವೃದ್ಧೆ ಮಹಿಳೆಯ ಹತ್ಯೆ ಹಾಗೂ ಇತ್ತೀಚೆಗೆ ಹಾಡಹಗಲೇ ಮಹಿಳೆಯ ಕತ್ತಿನಿಂದ ಚಿನ್ನಾಭರಣ ಅಪಹರಿಸಿದ ಆರೋಪಿಗಳು ಇನ್ನೂ ಪತ್ತೆಯಾಗದಿರುವ ಬಗ್ಗೆ ಜನವಲಯದಲ್ಲಿ ಅತಂಕ ಮಾಡಿದೆ. ಮಾದಾಪುರ ಪ್ರಶಾಂತ ಪ್ರದೇಶವಾಗಿದ್ದು ಅನ್ಯೋನ್ಯತೆಯಿಂದ ಇಲ್ಲಿ ಎಲ್ಲ್ಲ ಸಮುದಾಯದವರು ಜೀವನ ಸಾಗಿಸುತ್ತಿದ್ದಾರೆ. ಕಳೆದ 2ವರ್ಷ ಹಿಂದೆ ಪುತ್ತೂರಿನಲ್ಲಿ ದರೋಡೆ ಮಾಡಿದ ವ್ಯಕ್ತಿಗಳು ಮಾದಾಪುರದ ತನ್ನ ಸಂಬಂಧಿಕರೊಬ್ಬರ ಮನೆಯಲ್ಲಿ ಬೀಡುಬಿಟ್ಟಿದ್ದು, ಆನಂತರ ಪೊಲೀಸರ ವಶವಾಗಿದ್ದನ್ನು ಸ್ಮರಿಸಬಹುದು.
ಮಂಗಳೂರಿನ ಬ್ಯಾಂಕ್ನ ಹಣ ಬೆಂಗಳೂರಿನ ಶಾಖೆಗೆ ಸಾಗಿಸುವಾಗ ವಾಹನ ಸಮೇತ ನಾಪತ್ತೆಯಾಗಿದ್ದು, ಆನಂತರ ಬ್ಯಾಂಕಿನ ಸೆಕ್ಯೂರಿಟಿನ ಸಿಬ್ಬಂದಿಗಳೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದು ಕುಂಬಾರಗಡಿಕೆಯಲ್ಲಿ ಹಣ ಬಚ್ಚಿಟ್ಟಿದ ಬಗ್ಗೆ ಸುದ್ಧಿಯಾಗಿತ್ತು. ಅದರಲ್ಲಿ ಅಲ್ಪ ಮೊತ್ತ ವಶಪಡಿಸಿಕೊಂಡರೂ ಪ್ರಮುಖ ಆರೋಪಿಗಳು ಇಬ್ಬರೂ ಇನ್ನೂ ಸರೆಯಾಗಿಲ್ಲ.
ಇಗ್ಗೋಡ್ಲುವಿನಲ್ಲಿ 3 ತಿಂಗಳ ಹಿಂದೆ ಕಾಫಿ ಬೆಳೆಗಾರ ಮಹಿಳೆಯೊಬ್ಬರು ಮನೆಯಲ್ಲಿ ಏಕಾಂಗಿ ತೋಟ ನಿರ್ವಹಣೆ ಮಾಡಿಕೊಂಡು ಜೀವಿಸುತ್ತಿದ್ದು, ಅವರನ್ನು ರಾತ್ರಿ ವೇಳೆ ದುಷ್ಕರ್ಮಿಗಳು ಹಣ, ಚಿನ್ನಾಭರಣ ದೋಚಲು ಧಾಳಿ ನಡೆಸಿ ಹತ್ಯ ಮಾಡಿದ್ದರು. ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ.
ಇಗ್ಗೋಡ್ಲುವಿನಲ್ಲಿ ಇತ್ತೀಚೆಗೆ ದೇವಪಂಡ ಚಿನ್ನವ್ವ ಎಂಬವರು ಮಧ್ಯಾಹ್ನ ವೇಳೆ ನಡೆದುಕೊಂಡು ಮನೆಗೆ ತೆರಳುತ್ತಿದ್ದಾಗ ಮೋಟಾರ್ ಬೈಕ್ನಲ್ಲಿ ಬಂದ ಆಗುಂತಕರು ಅವರ ಕತ್ತಿನಲ್ಲಿದ್ದ ಚಿನ್ನಾಭರಣ ಕಸಿದು ಪರಾರಿಯಾಗಿದ್ದು, ಈ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿಲ್ಲದೆ ಇರುವ ಬಗ್ಗೆ ಮಾದಾಪುರ ವ್ಯಾಪ್ತಿಯ ಜನತೆ ಭಯಭೀತಿ ವ್ಯಕ್ತಪಡಿಸುತ್ತಿದ್ದಾರೆ.