ಗೋಣಿಕೊಪ್ಪ ವರದಿ, ನ. 30: ಬುಟ್ಟಿಯಂಡ ಜಿಮ್ಮಿ ಅಚ್ಚಪ್ಪ, ಅಶ್ವಿನಿ ಅಚ್ಚಪ್ಪ ಜ್ಞಾಪಕಾರ್ಥ ನಡೆದ ರಾಜ್ಯಮಟ್ಟದ ಅಂತರ್ ಕಾಲೇಜು ಹಾಕಿ ಟೂರ್ನಿಯಲ್ಲಿ ವೀರಾಜಪೇಟೆ ಕಾವೇರಿ ಕಾಲೇಜು ಚಾಂಪಿಯನ್, ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ತಂಡ ರನ್ನರ್ ಅಪ್ ಸ್ಥಾನ ಅಲಂಕರಿಸಿದೆ.

ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಗೋಣಿಕೊಪ್ಪ ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಹಾಗೂ ಹಾಕಿಕೂರ್ಗ್ ಸಹಯೋಗದಲ್ಲಿ ನಡೆದ ಮಂಗಳೂರು, ಮೈಸೂರು ವಿಶ್ವವಿದ್ಯಾಲಯ ಮಟ್ಟದ 21 ವರ್ಷದೊಳಗಿನ ಬಾಲಕರ ಹಾಕಿ ಟೂರ್ನಿಯ ಫೈನಲ್‍ನಲ್ಲಿ ವೀರಾಜಪೇಟೆ ಕಾವೇರಿ ಕಾಲೇಜು ತಂಡ ಕೊನೆಯ ಕ್ಷಣದಲ್ಲಿ ಮಿಂಚಿನ ಗೋಲು ದಾಖಲಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು.

ಪಂದ್ಯದ ಕೊನೆಯ 3 ಸೆಕೆಂಡ್‍ಗಳು ಉಳಿದಿರುವ ಸಂದರ್ಭ ಕಾವೇರಿ ಕಾಲೇಜು ತಂಡದ ಆಟಗಾರ ಮದನ್‍ಗೆ ಲಭಿಸಿದ ಪಾಸ್‍ನ್ನು ಗೋಲಾಗಿ ಪರಿವರ್ತಿಸಿ ಪ್ರಶಸ್ತಿಗೆ ಮುತ್ತಿಕ್ಕುವಂತೆ ಮಾಡಿದರು. ಈ ಕ್ಷಣದಲ್ಲಿ ಕ್ರೀಡಾಭಿಮಾನಿಗಳು ಕುಣಿದು ಕುಪ್ಪಳಿಸಿದರು. ಅವಕಾಶವನ್ನು ಕೈಚೆಲ್ಲಿಕೊಳ್ಳದ ತಂಡದ ಆಟಕ್ಕೆ ಕ್ರೀಡಾಭಿಮಾನಿಗಳು ಮನ ಸೋತರು. ಟೈ ಬ್ರೇಕರ್‍ನಲ್ಲಿ ಪಂದ್ಯ ಗೆಲ್ಲುವ ಹುಮ್ಮಿಸಿನಲ್ಲಿದ್ದ ಮಡಿಕೇರಿ ತಂಡ ನಿರಾಸೆ ಅನುಭವಿಸಿತು.

ವೀರಾಜಪೇಟೆ ತಂಡದ ಪರವಾಗಿ 2 ನೇ ನಿಮಿಷದಲ್ಲಿ ಬಿಪಿನ್, 9ರಲ್ಲಿ ಬೋಪಣ್ಣ, ಮಡಿಕೇರಿ ಪರ 17ನೇ ನಿಮಿಷದಲ್ಲಿ ನಾಣಯ್ಯ, 29ರಲ್ಲಿ ಕಾಳಿಮುತ್ತು ಗೋಲು ಹೊಡೆದರು. ವೀರಾಜಪೇಟೆಗೆ 3, ಮಡಿಕೇರಿಗೆ 6 ಪೆನಾಲ್ಟಿ ಕಾರ್ನರ್ ಲಭಿಸಿತು. ಪಂದ್ಯದ ಆರಂಭದಿಂದ ಉತ್ತಮ ಆಟ ಪ್ರದರ್ಶಿಸಿದ ಕಾವೇರಿ ಕಾಲೇಜು ಕೊನೆಯ ಕ್ಷಣದಲ್ಲೂ ಮಹತ್ವದ ಆಟ ಪ್ರದರ್ಶಿಸಿತು. ಮಡಿಕೇರಿ ಕಾರ್ಯಪ್ಪ ತಂಡದ ಆಟಗಾರರು ಉತ್ತಮ ಪಾಸ್ ನೀಡುವ ಮೂಲಕ ಗಮನ ಸೆಳೆದರು. ಆಟಗಾರ ಕಾಳಿಮುತ್ತು ಮೈದಾನದಲ್ಲಿ ಸಂಚಲನ ಮೂಡಿಸಿದರಾರೂ ಕಪ್ ಗೆಲ್ಲುವಲ್ಲಿ ಎಡವಿದರು.

ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ನಾಲ್ವರು ಆಟಗಾರ ರಿಗೆ ವಿಶೇಷ ಪ್ರಶಸ್ತಿ ನೀಡಲಾಯಿತು. ಬೆಸ್ಟ್ ಡಿಫೆಂಡರ್ ಆಟಗಾರನಾಗಿ ವೀರಾಜಪೇಟೆ ಕಾವೇರಿ ಕಾಲೇಜುವಿನ ಸುಖನ್, ಬೆಸ್ಟ್ ಹಾಫ್ ಆಟಗಾರನಾಗಿ ವೀರಾಜಪೇಟೆ ಸೆಂಟ್ ಆನ್ಸ್‍ನ ಸುಗನ್, ಗೋಲ್ ಕೀಪರ್ ಆಟಗಾರನಾಗಿ ಗೋಣಿಕೊಪ್ಪ ಕಾವೇರಿ ಕಾಲೇಜುವಿನ ಹೇಮಂತ್, ಬೆಸ್ಟ್ ಫಾರ್ವರ್ಡ್ ಆಟಗಾರನಾಗಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ತಂಡದ ಕಾಳಿಮುತ್ತು ಪಡೆದುಕೊಂಡರು.

ಕೊಡಗಿನ ಸಾಂಪ್ರದಾಯಿಕ ಆಭರಣ ಪೀಚೆಕತ್ತಿಯನ್ನು ಚಾಂಪಿಯನ್ ಹಾಗೂ ರನ್ನರ್ ಅಪ್ ತಂಡಗಳಿಗೆ ಬಹುಮಾನವಾಗಿ ನೀಡಲಾಯಿತು. ಫೈನಲ್ ಪ್ರವೇಶಿಸಿದ ತಂಡಗಳ ಆಟಗಾರರಿಗೆ ಬೆಳ್ಳಿ ಪದಕ ನೀಡುವ ಮೂಲಕ ಗೌರವಿಸಲಾಯಿತು.

ಸನ್ಮಾನ: ಸಮಾರೋಪದಲ್ಲಿ ಲಯನ್ಸ್ ಶಾಲೆಯ ಏಳು ಕ್ರೀಡಾಪಟುಗಳಿಗೆ ಬೆಳ್ಳಿ ಪದಕ ನೀಡುವ ಮೂಲಕ ಪ್ರೋತ್ಸಾಹಿಸಲಾಯಿತು. ಬಾಸ್ಕೆಟ್‍ಬಾಲ್ ಆಟಗಾರ್ತಿ ಅಲ್ಲುಮಾಡ ನಾಟ್ಯಾ ಸುನಿಲ್, ಹಾಕಿ ಆಟಗಾರರುಗಳಾದ ಚೋಯ ಮಾಡಂಡ ಆಕಾಶ್ ಬಿದ್ದಪ್ಪ, ನಿಕಿಲ್ ಕಾಳಯ್ಯ, ಶಿವನ್, ಗೌರವ್ ಗಣಪತಿ, ಸಪನ್ ಅಯ್ಯಪ್ಪ, ಉಜ್ವಲ್ ಅಪ್ಪಚ್ಚು ಅವರುಗಳನ್ನು ಗೌರವಿಸಲಾಯಿತು. ಹಿರಿಯ ಕ್ರೀಡಾಪಟುಗಳಾದ ಡಾ. ನೆರವಂಡ ದೇಚಮ್ಮ ಹಾಗೂ ಬುಟ್ಟಿಯಂಡ ಚೆಂಗಪ್ಪ ಅವರುಗಳನ್ನು ಸನ್ಮಾನಿಸಲಾಯಿತು.

ಸಮಾರೋಪದಲ್ಲಿ ಗೋಣಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಸೋಮೇಯಂಡ ಪೂಣಚ್ಚ, ಕಾರ್ಯದರ್ಶಿ ಪ್ರಣಿತಾ ಪೂಣಚ್ಚ, ಖಜಾಂಜಿ ಡಾ. ಅಮ್ಮಂಡ ಚಿಣ್ಣಪ್ಪ, ಲಯನ್ಸ್ ಮುಖ್ಯಸ್ಥ ಕೊಂಗಂಡ ಸುಬ್ಬಯ್ಯ, ಜಿಲ್ಲಾ ಗವರ್ನರ್ ಹೆಚ್. ಆರ್. ಹರೀಶ್, ದಾನಿ ಬುಟ್ಟಿಯಂಡ ಬೋಪಣ್ಣ, ಕಾಫಿ ಬೆಳೆಗಾರರುಗಳಾದ ಮೂಕಳೇರ ಕುಶಾಲಪ್ಪ, ಶಾಂತಿ ಕುಶಾಲಪ್ಪ ಉಪಸ್ಥಿತರಿದ್ದರು.

ಗೋಣಿಕೊಪ್ಪ ಕಾವೇರಿ ಕಾಲೇಜು ವಿದ್ಯಾರ್ಥಿಗಳಿಂದ ಸ್ವಾಗತ ನೃತ್ಯ ಹಾಗೂ ಉಮ್ಮತ್ತಾಟ್ ಪ್ರದರ್ಶನ ನಡೆಯಿತು. ದಿ. ಜಿಮ್ಮಿ ಅಚ್ಚಪ್ಪ, ಅಶ್ವಿನಿ ಅಚ್ಚಪ್ಪ ಅವರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನೆನಪಿಸಿಕೊಳ್ಳಲಾಯಿತು. ಹಿರಿಯ ವೀಕ್ಷಕ ವಿವರಣೆಗಾರ ಚೆಪ್ಪುಡೀರ ಕಾರ್ಯಪ್ಪ, ಜಿಮ್ಮಿ ಅಚ್ಚಪ್ಪ ಅವರ ರಾಜಕೀಯ ಹಾಗೂ ಕ್ರೀಡಾಪಟು ವಾಗಿ ಅವರ ಸೇವೆಯನ್ನು ಪರಿಚಯಿಸಿಕೊಟ್ಟರು.

ಟೂರ್ನಿ ನಿರ್ದೇಶಕರಾಗಿ ಕೋಡಿಮಣಿಯಂಡ ಗಣಪತಿ, ತಾಂತ್ರಿಕ ವರ್ಗದಲ್ಲಿ ಕಾಟುಮಣಿ ಯಂಡ ಕಾರ್ತಿಕ್, ನೆಲ್ಲಮಕ್ಕಡ ಪವನ್, ಮೇರಿಯಂಡ ಅಯ್ಯಣ್ಣ ಹಾಗೂ ಹರಿಣಾಕ್ಷಿ ಕಾರ್ಯನಿರ್ವಹಿಸಿದರು.