ಗೋಣಿಕೊಪ್ಪಲು, ನ. 28: ದಿವ್ಯಾಂಗ ಚೇತನ ಮಕ್ಕಳು ದೇವರಿಗೆ ಸಮಾನ. ವಿಶೇಷಚೇತನರಿಗೆ ಸಹಾಯ ಹಸ್ತ ನೀಡುವದು ಸೇವೆ ಅಲ್ಲ. ಅದು ನಮ್ಮ ಕರ್ತವ್ಯ. ಕಳೆದ ಹಲವು ವರ್ಷಗಳಿಂದ ವಿಶೇಷಚೇತನ ಮಕ್ಕಳ ಅಭ್ಯುದಯಕ್ಕಾಗಿ ತಾನು ಹೋರಾಟ ಮಾಡುತ್ತಾ ಬಂದಿದ್ದು, ಜಿ.ಪಂ. ನಲ್ಲಿಯೂ ಮೀಸಲಿಡಲು ಹೋರಾಟ ಮಾಡುತ್ತಿರುವದಾಗಿ ಜಿ.ಪಂ. ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ನುಡಿದರು.
ಗೋಣಿಕೊಪ್ಪಲು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೊಡಗು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ವೀರಾಜಪೇಟೆ ಸ್ವಯಂ ಸೇವಾ ಸಂಸ್ಥೆ, ಪಾಲಿಬೆಟ್ಟ ಚೆಷೈರ್ ಹೋಮ್, ದೇವರಪುರ ಅಮೃತವಾಣಿ, ಸತ್ಯಸಾಯಿ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಶ್ವ ವಿಶೇಷಚೇತನರ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಶಿಶು ಅಭಿವೃದ್ಧಿ ಯೋಜನಾ ಧಿಕಾರಿ ಎ.ಪಿ. ಲೀಲಾವತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕು ಮಟ್ಟದ ವಿಶೇಷಚೇತನರ ಕ್ರೀಡಾಕೂಟಕ್ಕೆ ಸರಕಾರದ ಯಾವದೇ ಅನುದಾನವಿಲ್ಲ. ದಾನಿಗಳು ಹಾಗೂ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಕಳೆದ ಎರಡು ವರ್ಷದಿಂದ ಸುಮಾರು 14 ಸ್ಪರ್ಧೆಗಳನ್ನು ಏರ್ಪಡಿಸುತ್ತಾ ಬರಲಾಗಿದೆ. ಈ ಬಾರಿ 40ಕ್ಕೂ ಅಧಿಕ ವಿಕಲಚೇತನರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದು, ಜಿ.ಪಂ. ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ಗೋಣಿಕೊಪ್ಪಲು ಗ್ರಾ.ಪಂ., ಸತ್ಯಸಾಯಿ ಸೇವಾ ಟ್ರಸ್ಟ್ ಮುಂತಾದ ಸಂಘ-ಸಂಸ್ಥೆಗಳು ಪೂರಕ ಸಹಕಾರ ನೀಡಿರುವದಾಗಿ ಹೇಳಿದರು. ಪಾಲಿಬೆಟ್ಟ ಚೆಷೈರ್ ಹೋಮ್ ಕ್ರೀಡಾಕೂಟದ ರೂಪುರೇಷೆಯೊಂದಿಗೆ ಕ್ರೀಡಾಕೂಟದ ಯಶಸ್ಸಿನಲ್ಲಿ ಭಾಗಿಯಾಗಿರುವದಾಗಿ ಶ್ಲಾಘಿಸಿದರು.
ವೀರಾಜಪೇಟೆ ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶೇಷಚೇತನ ಒಂದು ಶಾಪವಲ್ಲ. ಅವರಿಗೆ ದೇವರು ವಿಶೇಷ ಪ್ರತಿಭೆ ನೀಡಿದ್ದು, ಕೇವಲ ಕಾಲಿನ ಬೆರಳಿನಿಂದ ಅಪೂರ್ವ ಚಿತ್ರಕಲೆ ರಚಿಸಿ ವಿಶ್ವಖ್ಯಾತರಾಗಿದ್ದಾರೆ. ವಿಕಲಾಂಗ ದೇವರ ವರವೆಂದು ಪರಿಗಣಿಸಿ, ಸವಾಲಾಗಿ ಸ್ವೀಕರಿಸುವ ಮೂಲಕ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಕರೆ ನೀಡಿದರು.
ಗೋಣಿಕೊಪ್ಪಲು ಗ್ರಾ.ಪಂ. ಅಧ್ಯಕ್ಷೆ ಎಂ. ಸೆಲ್ವಿ ಉದ್ಘಾಟನೆ ನೆರವೇರಿಸಿ, ಶುಭ ಕೋರಿದರು. ಸತ್ಯಸಾಯಿ ಸೇವಾ ಟ್ರಸ್ಟ್‍ನ ಅಧ್ಯಕ್ಷ ಅಪ್ಪಯ್ಯ, ನಂದಾ, ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶಾಂತಿ, ಮಹಿಳಾ ಸಮಾಜ ಅಧ್ಯಕ್ಷೆ ಸುಮಿ ಸುಬ್ಬಯ್ಯ, ಗ್ರಾ.ಪಂ. ಸದಸ್ಯೆ ರತಿ ಅಚ್ಚಪ್ಪ ಮುಂತಾದವರು ಮಾತನಾಡಿದರು.
ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯ ಸುರೇಶ್ ರೈ, ಚೆಷೈರ್ ಹೋಮ್ ಮುಖ್ಯ ಶಿಕ್ಷಕ ಶಿವರಾಜ್, ದೇವರಪುರ ಅಮೃತವಾಣಿ ಮುಖ್ಯ ಶಿಕ್ಷಕಿ ಸಿಸ್ಟರ್ ರಜಿನಾ, ಚೆಷೈರ್ ಹೋಮ್ ಗೌರವ ಕಾರ್ಯದರ್ಶಿ ಆಶಾ ಸುಬ್ಬಯ್ಯ, ಗೀತಾ ಚಂಗಪ್ಪ, ಪುನಿತಾ ರಾಮಸ್ವಾಮಿ ಉಪಸ್ಥಿತರಿದ್ದರು.
ಅತಿಥಿಗಳಿಗೆ ಸಸಿಗಳನ್ನು ನೀಡುವ ಮೂಲಕ ಸ್ವಾಗತ ಕೋರಲಾಯಿತು. ವಿಶೇಷಚೇತನ ಬಾಲಕ ಧನುಷ್ ಪ್ರಾರ್ಥನೆ, ಚೆನ್ನಯ್ಯನಕೋಟೆ ಸುಬ್ರಮಣಿ ಸ್ವಾಗತ, ಶಿಕ್ಷಕಿ ಗೀತಾ ನಾಯ್ಡು ಕಾರ್ಯಕ್ರಮ ನಿರೂಪಣೆ, ವಂದನಾರ್ಪಣೆ ನೆರವೇರಿಸಿದರು.