ಮಡಿಕೇರಿ, ನ. 28: ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಡಿ. 9 ರಂದು ಬೆಳಿಗ್ಗೆ 10 ಗಂಟೆಗೆ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ.

ಈ ಅದಾಲತ್‍ನಲ್ಲಿ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ರಾಜಿಯಾಗುವಂತಹ ಪ್ರಕರಣ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವದು. ಕಲಂ 138 ಎನ್‍ಐ ಆಕ್ಟ್ (ಚೆಕ್ ಅಮಾನ್ಯ ಪ್ರಕರಣಗಳು), ಬ್ಯಾಂಕ್ ಪ್ರಕರಣಗಳು, ಹಣ ವಸೂಲಾತಿ(ಬಾಕಿ ಹಾಗೂ ವ್ಯಾಜ್ಯ ಪೂರ್ವ ಮೋಟಾರು ವಾಹನ ಅಪಘಾತ ಪರಿಹಾರ ವ್ಯಾಜ್ಯಗಳು ಮತ್ತು ವಿಮಾ ಪ್ರಕರಣಗಳು), ಕಾರ್ಮಿಕ ಮತ್ತು ಕೌಟುಂಬಿಕ, ನೀರು ವಿದ್ಯುಚ್ಛಕ್ತಿಗೆ ಸಂಬಂಧಿಸಿದ ವ್ಯಾಜ್ಯಗಳು, ಸಿವಿಲ್ ಮತ್ತು ಕಂದಾಯ ಪ್ರಕರಣಗಳು, ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು, ಸಂಚಾರ, ಲಘು ಪ್ರಕರಣಗಳು, ಸೇವಾ ವ್ಯಾಜ್ಯಗಳು, ಕಾನೂನಿನನ್ವಯ ರಾಜಿಯಾಗಬಹುದಾದ ಎಲ್ಲಾ ತರಹದ ಪ್ರಕರಣಗಳನ್ನು ಜನತಾ ನ್ಯಾಯಾಲಯಗಳ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ ಸಮೀಪದ ಎಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಥವಾ ತಾಲೂಕು ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿ.ಜೆ.ಎಂ. ತಿಳಿಸಿದ್ದಾರೆ.