ವೀರಾಜಪೇಟೆ, ನ. 28: ದಕ್ಷಿಣ ಕೊಡಗು ಕುಂದ ಗ್ರಾಮದ ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಹುತ್ತರಿ ಕೋಲ್ ಮಂದ್ ಡಿ. 5 ರಂದು ನಡೆಯಲಿದೆ ಎಂದು ಮೂಂದ್‍ನಾಡ್‍ನ ತಕ್ಕ ಮುಖ್ಯಸ್ಥ ಅಡ್ಡಂಡ ಪ್ರಕಾಶ್ ಕುಶಾಲಪ್ಪ ತಿಳಿಸಿದ್ದಾರೆ.

ಇಲ್ಲಿನ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕೊಡವ ಸಂಸ್ಕøತಿ, ಸಾಹಿತ್ಯ, ಪರಂಪರೆ ಹಾಗೂ ಕಲೆಯನ್ನು ಉಳಿಸಿ ಬೆಳೆಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದೆ. ಇಂತಹ ಕೋಲ್ ಮಂದ್‍ನಲ್ಲಿ ಕೊಡವ ಸಮುದಾಯದ ಪ್ರತಿಯೊಬ್ಬರು ಭಾಗವಹಿಸುವಂತಾಗಬೇಕು ಎಂದರು.

ಬೇರಳಿನಾಡು ತಕ್ಕ ಮುಖ್ಯಸ್ಥ ಮಳವಂಡ ಪ್ರಭು ಪೂಣಚ್ಚ ಮಾತನಾಡಿ, ಮೂಂದ್ ನಾಡ್ ಕೈಮುಡಿಕೆ ಕೋಲ್ ಮಂದ್ ಪ್ರಯುಕ್ತ ಬಾಳೋಪಾಟ್, ಉಮ್ಮತಾಟ್, ಬೊಳಕಾಟ್ ಕೋಲಾಟ್, ಪರೆಯಕಳಿ, ಕತ್ತಿಯಾಟ್, ಕುರುಬ ಆಟ್, ಎರವ ಆಟ್, ವಾಲಗತಾಟ್, ಕೊಡವ ಪಾಟ್ ಇನ್ನಿತರ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.

ಕುತ್ತುನಾಡ್ ತಕ್ಕ ಪಂದಿಮಾಡ ರಮೇಶ್ ಮಾತನಾಡಿ, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಹಾಗೂ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ರಾಜೀವ್ ಬೋಪಯ್ಯ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಮೂಕಚಂಡ ಅರುಣ್ ಅಪ್ಪಣ್ಣ, ಸಹ ಕಾರ್ಯದರ್ಶಿಗಳಾದ ತೀತಮಾಡ ವಾಸು ಗಣಪತಿ, ತೀತಿಮಾಡ ಗಣೇಶ್ ಗಾಂಧಿ ಹಾಜರಿದ್ದರು.