ಗೋಣಿಕೊಪ್ಪಲು, ನ.24: ಶಾಲಾ ವಾರ್ಷಿಕೋತ್ಸವ ಅಂದ ಮೇಲೆ ಅಲ್ಲಿ ಬೃಹತ್ ಶಾಮಿಯಾನ,ಸೌಂಡ್ ಸಿಸ್ಟಂ, ವೀಡಿಯೋ ಗ್ರಾಫರ್ ಫೋಟೋ ಗ್ರಾಫರ್, ನಮ್ಮ ಕಣ್ಣಿಗೆ ಕಂಡು ಬರುವ ಸಹಜವಾದ ದೃಶ್ಯ. ಆದರೆ ಪ್ರಕೃತಿಯ ಮಡಿಲಿನ ಸುಂದರ ಪರಿಸರದಲ್ಲಿ ಇಂತಹ ಆಡಂಬರವಿಲ್ಲದೆ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರಸೂಸುವ ಪ್ರಯತ್ನಕ್ಕೆ ದಕ್ಷಿಣ ಕೊಡಗಿನ ಹುದಿಕೇರಿ ಸಮೀಪದ ನಡಿಕೇರಿಯ ತಪಸ್ಯಾ ಆಂಗ್ಲ ಮಾಧ್ಯವi ಪ್ರೌಢ ಶಾಲೆ ವಿನೂತನ ವೇದಿಕೆಯನ್ನು ಬಳಸಿಕೊಂಡು ಕಾರ್ಯಕ್ರಮವನ್ನು ನಡೆಸುವ ಮೂಲಕ ಶಾಲೆಯ ವಾರ್ಷಿಕೋತ್ಸವವನ್ನು ಅರ್ಥ ಪೂರ್ಣವಾಗಿ ಆಚರಿಸಿಕೊಂಡಿದೆ.

ಬೃಹತ್ ಆಲದ ಮರದ ನೆರಳಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ ಈ ಸಂಸ್ಥೆ, ಶಾಲೆಯ ವಿದ್ಯಾರ್ಥಿಗಳಿಂದ ವಿನೂತನ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳಲ್ಲಿ ಅಡಗಿದ್ದ ಪ್ರತಿಭೆಗಳನ್ನು ಸಾರ್ವಜನಿಕರ, ಪೋಷಕರ ಮುಂದೆ ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳು ಸಾರ್ವಜನಿಕರ ಚಪ್ಪಾಳೆ ಗಿಟ್ಟಿಸಿದರು. ಎಲ್ಲಾ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳೇ ನಡೆಸುವದರ ಮೂಲಕ ಗಮನ ಸೆಳೆದರು.

ತಪಸ್ಯಾ ಪ್ರೌಢ ಶಾಲೆಯ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ ಕ್ಷಮಾ ಪೂಣಚ್ಚ ಸಾಧನೆ ಮಾಡಿದ್ದು, ಈ ವಿದ್ಯಾರ್ಥಿನಿ ಕೇಂದ್ರ ಸರ್ಕಾರ ನಡೆಸುವ ಪ್ರತಿಷ್ಠಿತ ಪರೀಕ್ಷೆಯಾದ ಎನ್‍ಟಿಎಸ್‍ಸಿ ಪರೀಕ್ಷೆಯಲ್ಲಿ ರ್ಯಾಂಕ್‍ನ್ನು ಗಳಿಸಿ ಕರ್ನಾಟಕ ರಾಜ್ಯದಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಗ್ರಾಮೀಣ ಭಾಗದ ಪ್ರತಿಭೆಯಾಗಿದ್ದಾಳೆ. ಇವಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ವಿವಿಧ ಕ್ರೀಡೆಯಲ್ಲಿ ಪಾಲ್ಗೊಂಡು ವಿಜೇತರಾದ ಬೋಪಣ್ಣ. ಸಿ.ಪಿ. ಮಿರಿಲ್.ಎಂ.ಎನ್. ಮುಬಾರಕ್, ರಂಜಿತ ಕೆ.ಆರ್. ಅಪ್ಪಚ್ಚು. ಬಿ.ಎಂ, ತರುಣ್ ಅಯ್ಯಪ್ಪ.ಕೆ.ಟಿ., ರೋಹನ್.ಡಿ.ಬಿ. ಸುಮನ ಕೆ.ಎಂ.ದಿವ್ಯ ದೇಚಮ್ಮ. ಕೆ.ಬಿ. ಅಮೀನ ಕೆ.ಎಂ. ರಶ್ಮಿತಾ ಕೆ.ಆರ್. ಕರುಂಬಯ್ಯ ಎನ್.ಎಸ್. ಮುತ್ತಣ್ಣ.ಕೆ.ಬಿ. ಶಶಿ ದೇಚಮ್ಮ ಡಿ.ಬಿ. ಎಂಬ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ‘ಕೊಡಗು ಧ್ವನಿ’ವಾರಪತ್ರಿಕೆಯ ಸಂಪಾದಕ ಹೆಚ್.ಕೆ.ಜಗದೀಶ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಸುಂದರವಾದ ಪರಿಸರದ ನಡುವೆ ಸಿಗುವ ವಿದ್ಯಾಭ್ಯಾಸ ಗಿಜಿಗಿಡುವ ನಗರ ಪ್ರದೇಶದಲ್ಲಿ ಸಿಗುವದಿಲ್ಲ. ಸಾಧನೆ ಮಾಡಲು ನಗರ ಪ್ರದೇಶ ಬೇಕಾಗಿಲ್ಲ. ಗ್ರಾಮೀಣ ಭಾಗದಲ್ಲೇ ಸಾಕಷ್ಟು ಸಂಪನ್ಮೂಲಗಳಿರುವದರಿಂದ ಇವುಗಳನ್ನು ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಹೊಸ ಹೊಸ ಸಾಧನೆಗೆ ಮುಂದಾಗಬೇಕೆಂದು ಕರೆ ನೀಡಿದರು. ಮುಖ್ಯೋಪಾಧ್ಯಾಯ ರಾದ ಕಾವೇರಮ್ಮ ಪಿ.ಬಿ. ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶಿಕ್ಷಕರಾದ ಪೂಣಚ್ಚ ಸಿ.ಯು. ಅಂಜು.ಪಿ.ಆರ್. ಸೌಮ್ಯ ಬಿ.ಎ. ವೇದಿಕೆಯಲ್ಲಿ ಉಪಸ್ಥಿತರಿದ್ದರು.