ಮಡಿಕೇರಿ, ನ. 22: ಹೇಳಿ ಕೇಳಿ ಕೊಡಗು ಪ್ರವಾಸೋದ್ಯಮ ಜಿಲ್ಲೆ ಎಂಬ ಗರಿ ಪಡೆದುಕೊಂಡಿದ್ದು, ನಿತ್ಯ ದೇಶ - ವಿದೇಶಗಳಿಂದ ಪ್ರವಾಸಿಗರು ಇತ್ತ ಆಗಮಿಸುತ್ತಿದ್ದಾರೆ. ಇಂತಹ ಪ್ರವಾಸೋದ್ಯಮ ಪಟ್ಟಿಯಲ್ಲಿ ಧಾರ್ಮಿಕ ಕ್ಷೇತ್ರಗಳಾದ ಇರ್ಪು ರಾಮೇಶ್ವರ, ತಲಕಾವೇರಿ, ಭಾಗಮಂಡಲ, ನಾಲ್ಕುನಾಡು ಅರಮನೆ, ಚೇಲಾವರ, ಮಲ್ಲಳ್ಳಿ, ಅಬ್ಬಿ ಜಲಪಾತಗಳು, ರಾಜರ ಅರಮನೆಗಳು, ಗದ್ದುಗೆ, ರಾಜಾಸೀಟ್, ಓಂಕಾರೇಶ್ವರ ದೇವಾಲಯ ಸೇರಿದಂತೆ ಈಚೆಗೆ ಮಾಂದಲಪಟ್ಟಿ ಹಾಗೂ ಕೋಟೆ ಅಬ್ಬಿ ಪ್ರಚಾರದಲ್ಲಿದೆ.
ಈ ಎಲ್ಲ ಸ್ಥಳಗಳ ದರ್ಶನ ಮಾಡಲು ಯಾವ ರಸ್ತೆಯೂ ಸುಲಲಿತವಾಗಿಲ್ಲ; ಬದಲಾಗಿ ಹಳ್ಳ, ಗುಂಡಿಗಳನ್ನು ಎಣಿಸುತ್ತಾ ಸಾಗಬೇಕಿದೆ. ಇನ್ನೊಂದೆಡೆ ತೀರಾ ನಿಸರ್ಗ ರಮಣೀಯ ಮಾಂದಲಪಟ್ಟಿಗೆ ತೆರಳಬೇಕಿದ್ದರೆ ಆ ಮಾರ್ಗದಲ್ಲಿ ಪ್ರಾಣವನ್ನು ಪಣಕ್ಕಿಟ್ಟು ಸಾಗಬೇಕಾದ ಅಪಾಯಕಾರಿ ರಸ್ತೆ ಎದುರಾಗಲಿದೆ.
ತೀರಾ ಕಡಿದಾದ ಮತ್ತು ಕಿರಿದಾದ ಕಣಿವೆ ನಡುವಿನ ರಸ್ತೆಯಲ್ಲಿ ಹೆಜ್ಜೆ ಹೆಜ್ಜೆಗೂ ಅಪಾಯದ ಕಲ್ಲುರಾಶಿಯೊಂದಿಗೆ ಗುಂಡಿಗಳಲ್ಲಿ ಬಿದ್ದೇಳುವ ವಾಹನಗಳ ಸಂಚಾರ ನೋಡಿದರೆ ಪ್ರಾಕೃತಿಕ ತಾಣದ ಸೊಬಗು ಸವಿಯುವ ಕಂಗಳಿಗೆ ಅವು ಹಿಂತಿರುಗುವಷ್ಟರಲ್ಲಿ ಮನದಲ್ಲಿ ಉಳಿಯಲು ಸಾಧ್ಯವಿಲ್ಲ.
ಕಾರಣಗಳು ಹಲವು : ಸ್ಥಳೀಯ ಯುವಕರಿಗೆ ಸ್ವ ಉದ್ಯೋಗದ ಲೆಕ್ಕಾಚಾರದಿಂದ ನಗರದಿಂದ ಆರು ಕಿ.ಮೀ. ದೂರದಲ್ಲಿರುವ ನಂದಿಮೊಟ್ಟೆಯಿಂದ ಪ್ರವಾಸಿಗರನ್ನು ಅವರುಗಳು ಬರುವ ಸ್ವಂತ ವಾಹನಗಳಿಂದ ಇಳಿಸಿ ಜೀಪುಗಳಲ್ಲಿ ಕರೆದೊಯ್ಯುವ ವ್ಯವಸ್ಥೆಯನ್ನು ಜನಪ್ರತಿನಿಧಿಗಳ ನೆರಳಿನಲ್ಲಿ ಹುಟ್ಟುಹಾಕಲಾಯಿತು. ದಿನಗಳು ಕಳೆದಂತೆ ಕೆಲವರಿಗೆ ಇದೊಂದು ದಂಧೆಯ ಸ್ವರೂಪ ಪಡೆದುಕೊಂಡಿತು.
ಇಲ್ಲಿ ಜಾತಿ, ಭಾಷೆ, ಮತ, ಪಂಥಗಳೊಂದಿಗೆ ರಾಜಕೀಯ ಸುಳಿದು ಬಾಡಿಗೆಗೆ ವಾಹನ ಓಡಿಸುತ್ತಿದ್ದವರ ನಡುವೆ ಗುಂಪುಗಾರಿಕೆ ಹುಟ್ಟಿಕೊಂಡು ಅನೇಕ ಬಾರಿ ಸಂಘರ್ಷ, ಬಡಿದಾಟ, ಪ್ರಾಣಹಾನಿಯೂ ಘಟಿಸಿ ಹೋಯಿತು. ಇದೀಗ ಮಾಂದಲಪಟ್ಟಿಗೆ ಜೀಪುಗಳ ಓಡಾಟವೇ ಬೇಡ ಎನ್ನುವಷ್ಟರಮಟ್ಟಿಗೆ ವೈಮನಷ್ಯ ಅಥವಾ ಘರ್ಷಣೆ ತಿರುವು ಪಡೆದುಕೊಂಡಿದೆ.
ಕೆಟ್ಟರಸ್ತೆ: ಕೊಡಗಿನ ಎಲ್ಲಿಯೂ ಕಂಡು ಕೇಳದಷ್ಟು ಮಾಂದಲಪಟ್ಟಿ ರಸ್ತೆ ಕೆಟ್ಟು ಹೋಗಿದೆ. ಜೀಪು ಚಾಲಕರ ಸಂಘರ್ಷದಿಂದ ಸ್ವಂತ ಕಾರು ಇತ್ಯಾದಿಗಳಲ್ಲಿ ತೆರಳಬೇಕಾದ ಪ್ರವಾಸಿಗರು ಇಂದು ಮಾರ್ಗದ ಅಲ್ಲಲ್ಲಿ ವಾಹನಗಳು ಕೆಟ್ಟು ನಿಲ್ಲುವ ಸ್ಥಿತಿಯಲ್ಲಿ ಅಸಹಾಯಕತೆಯಿಂದ ಹೆಜ್ಜೆ ಇರಿಸುವ ದೃಶ್ಯ ಎದುರಾಗಲಿದೆ. ಮುಂದೆ ಹೋಗಲಾರದೆ ಹಿಂದಕ್ಕೆ ಬರಲಾರದೆ ಪಾಡು ಪಡುತ್ತಿದ್ದಾರೆ.
ಜೀಪು ಸ್ಥಗಿತ: ಸ್ಥಳೀಯರು ಮತ್ತು ಹೊರಗಿನವರು (ಊರಿನವರು ಮತ್ತು ಮಡಿಕೇರಿ, ಮಕ್ಕಂದೂರು, ಮದೆ, ಭಗವತಿನಗರ (ಇವರೆಲ್ಲ ಹೊರಗಿನವರು) ಎಂಬ ಗೊಂದಲದಿಂದಾಗಿ ಇಂದು ಜೀಪುಗಳ ಸಂಚಾರ ಸ್ಥಗಿತಗೊಂಡಿದೆ. ಬದಲಾಗಿ ನಿನ್ನೆಯಿಂದ ನಂದಿಮೊಟ್ಟೆ ತಿರುವಿನಲ್ಲಿ ಕೂಡ ಜೀಪುಗಳ ನಿಲುಗಡೆ ನಾಪತ್ತೆಯಾಗಿರುವದು ಗೋಚರಿಸಿದೆ.
ಜಿ.ಪಂ. ಅಧ್ಯಕ್ಷರ ಪ್ರತಿಕ್ರಿಯೆ: ನಂದಿಮೊಟ್ಟೆ - ಮಾಂದಲಪಟ್ಟಿ ನಡುವೆ ಹದಗೆಟ್ಟಿರುವ ರಸ್ತೆ ಬಗ್ಗೆ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ ಅವರ ಗಮನ ಸೆಳೆದಾಗ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಈ ಮೊದಲು ನಿರ್ಮಾಣಗೊಂಡಿರುವ ರಸ್ತೆ ಹಾಳಾಗಿದ್ದು, ರೂ. 5 ಕೋಟಿಯ ಪ್ರಸ್ತಾವನೆಯನ್ನು ಸಂಬಂಧಿಸಿದ ಇಲಾಖೆಗೆ ಸಲ್ಲಿಸಿದ್ದು, ಹಣ ಲಭಿಸಿಲ್ಲವೆಂದು ‘ಶಕ್ತಿ’ಯೊಂದಿಗೆ ತಿಳಿಸಿದ್ದಾರೆ.
ಗ್ರಾ.ಪಂ. ಅಧ್ಯಕ್ಷರ ಹೇಳಿಕೆ: ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಮಾಂದಲಪಟ್ಟಿಯಲ್ಲಿ ಬಾಡಿಗೆ ವಿಷಯದಲ್ಲಿ ಕೆಲವರು ಕಾನೂನು ಮೀರಿ ಅತಿರೇಕದ ವರ್ತನೆ ತೋರುತ್ತಿರುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾ.ಪಂ. ಅಧ್ಯಕ್ಷ ಸುಭಾಷ್ ಸೋಮಯ್ಯ ಪ್ರತಿಕ್ರಿಯಿಸಿದ್ದಾರೆ. ಪಂಚಾಯಿತಿಯಿಂದ ವಾಹನಗಳಿಗೆ ಶುಲ್ಕದೊಂದಿಗೆ ನಿಯಮಾನುಸಾರ ಟೆಂಡರ್‍ನಲ್ಲಿ ಪ್ರಸಕ್ತ ಸಾಲಿಗೆ ರೂ. 11.50 ಲಕ್ಷಕ್ಕೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅರಣ್ಯ ಹಾಗೂ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳು ತಮ್ಮ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಯಾರಿಗೂ ತೊಂದರೆ ಕೊಡುವ ಉದ್ದೇಶವಿಲ್ಲವೆಂದು ಅಭಿಪ್ರಾಯಪಟ್ಟಿವೆ. ಪೊಲೀಸ್ ಇಲಾಖೆ ಕೂಡ ಜೀಪುಗಳ ಓಡಾಟ ಸಂಬಂಧ ಹುಟ್ಟಿಕೊಂಡಿರುವ ಮನಸ್ತಾಪ ಬಗೆಹರಿಸಲು ಒಂದು ವಾರದೊಳಗೆ ಸಭೆ ಏರ್ಪಡಿಸುವ ಇಂಗಿತ ವ್ಯಕ್ತಪಡಿಸಿದೆ.
ಲಂಚ ನಿರಾಕರಣೆ : ಮಾಂದಲಪಟ್ಟಿಗೆ ಜೀಪುಗಳಲ್ಲಿ ಪ್ರವಾಸಿಗರನ್ನು ಕರೆದೊಯ್ಯುವ ಸಂಬಂಧ, ಯಾವ ಇಲಾಖೆಗೂ ಲಂಚ ನೀಡಿಲ್ಲವೆಂದು ಜೀಪು ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಪಿ.ಟಿ. ಉನ್ನಿಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಗ್ರಾಮಸ್ಥರ ಆಗ್ರಹ: ಮಾಂದಲಪಟ್ಟಿಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಿರುವದರಿಂದ ಸ್ಥಳೀಯ ಯುವ ಸಮೂಹಕ್ಕೆ ಉದ್ಯೋಗ ಸೃಷ್ಟಿಯಾಗಿದೆ. ಆದ್ದರಿಂದ ಯಾವದೇ ಕಾರಣಕ್ಕೂ ಮಾಂದಲಪಟ್ಟಿ ಪ್ರವೇಶವನ್ನು ನಿಷೇಧಿಸಬಾರದೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮದ ಹಿರಿಯ ಎ.ಟಿ. ಮಾದಪ್ಪ, ಹೊರಗಿನಿಂದ ಬಂದಿರುವ ಜೀಪು ಚಾಲಕರಿಂದ ಪ್ರವಾಸಿ ತಾಣದಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಗ್ರಾಮ ಪಂಚಾಯ್ತಿ, ಪೊಲೀಸ್ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಅರಣ್ಯ ಇಲಾಖೆ ಒಟ್ಟಾಗಿ ವಿಶೇಷ ಸಭೆ ನಡೆಸುವ ಮೂಲಕ ಗೊಂದಲವನ್ನು ನಿವಾರಿಸಬೇಕೆಂದು ಒತ್ತಾಯಿಸಿದರು.
ಮಾಂದಲಪಟ್ಟಿಯ ಪ್ರವೇಶಕ್ಕೆ ನಿಷೇಧ ಹೇರಿದರೆ ಗ್ರಾಮಸ್ಥರು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಆರ್ಥಿಕವಾಗಿ ಹಿಂದುಳಿದಿರುವ ಸ್ಥಳೀಯ ಗ್ರಾಮದ ಯುವ ಸಮೂಹ ಪ್ರವಾಸಿ ತಾಣ ಮಾಂದಲ ಪಟ್ಟಿಯಿಂದಾಗಿ ಉದ್ಯೋಗವನ್ನು ಸೃಷ್ಟಿಸಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಆದರೆ, ಹೊರಗಿನಿಂದ ಬರುತ್ತಿರುವ ಜೀಪು ಚಾಲಕರು ಪ್ರವಾಸಿಗರಿಂದ ಅಧಿಕ ಹಣ ವಸೂಲಿ ಮಾಡುತ್ತಿರುವದಲ್ಲದೆ, ದಬ್ಬಾಳಿಕೆ ನಡೆಸುತ್ತಿರುವದರಿಂದ ಗೊಂದಲ ಸೃಷ್ಟಿಯಾಗಿದೆ ಎಂದು ಆರೋಪಿಸಿದರು.
ಕೆಲವು ಜೀಪ್ ಮತು ಪಿಕಪ್ ವಾಹನ ಚಾಲಕರು ಹತ್ತು ಹದಿನೈದು ಮಂದಿಯನ್ನು ಕರೆದೊಯ್ಯಲು 2500 ರೂ.ಗಳಿಂದ 3 ಸಾವಿರ ರೂ. ಬಾಡಿಗೆ ಪಡೆಯುತ್ತಿದ್ದರು. ಒಂದು ವಾಹನದಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಕರೆದೊಯ್ಯುವದರಿಂದ ಎಲ್ಲರಿಗೂ ಬಾಡಿಗೆ ದೊರೆಯುವದಿಲ್ಲವೆನ್ನುವ ಅಭಿಪ್ರಾಯ ಕೆಲವು ಚಾಲಕರಲ್ಲಿದೆ. ಇದನ್ನು ಪರಿಗಣಿಸಿ ಆರ್‍ಟಿಒ ಅಧಿಕಾರಿಗಳು ಅಥವಾ ಪೆÀÇಲೀಸ್ ಅಧಿಕಾರಿಗಳು ನಿಯಮ ಮೀರಿ ಅಧಿಕ ಸಂಖ್ಯೆಯ ಜನರನ್ನು ಕರೆದೊಯ್ಯುವ ವಾಹನ ಚಾಲಕರ ವಿರುದ್ಧ ಮತ್ತು ಬಿಳಿ ಫಲಕದ ವಾಹನವನ್ನು ಬಾಡಿಗೆಗೆ ಬಳಸುವ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೆ. ನಿಡುಗಣೆ ಗ್ರಾಮ ಪಂಚಾಯಿತಿಗೆ ಒಳಪಡುವ ಪ್ರದೇಶದಲ್ಲೆ ಸಮಸ್ಯೆ ಇದ್ದು, ಈ ಗ್ರಾಮ ಪಂಚಾಯಿತಿಯ ಬೇಜವಾಬ್ದಾರಿಯೇ ಇಷ್ಟೆಲ್ಲ ಗೊಂದಲ ಸೃಷ್ಟಿಗೆ ಕಾರಣವೆಂದು ಆರೋಪಿಸಿದರು. ಮಾಂದಲಪಟ್ಟಿ ಇರುವ ಗಾಳಿಬೀಡು ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವದೇ ಸಮಸ್ಯೆಗಳಿಲ್ಲವೆಂದು ಸ್ಪಷ್ಟಪಡಿಸಿದರು. ರಸ್ತೆ ಬದಿ ವಾಹನ ನಿಲುಗಡೆ ಮಾಡುವದನ್ನು ನಿಲ್ಲಿಸಬೇಕು ಮತ್ತು ಮದ್ಯಪಾನ ಮಾಡಿ ಅತೀ ವೇಗವಾಗಿ ವಾಹನ ಚಾಲನೆ ಮಾಡುವದನ್ನು ನಿರ್ಬಂಧಿಸಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಗ್ರಾಮಸ್ಥರಾದ ಕೆ.ಪಿ. ಗಣಪತಿ, ಕೆ.ಯು. ಕಾಳಪ್ಪ, ಕೆ.ಪಿ. ಪ್ರದೀಪ್, ಸಿ.ಬಿ. ಗಿರಿಶ್ ಹಾಗೂ ಲೋಕೇಶ್ ಉಪಸ್ಥಿತರಿದ್ದರು.
ಕದಡಿದ ಶಾಂತಿ: ಒಟ್ಟಿನಲ್ಲಿ ಮಾಂದಲಪಟ್ಟಿ ಪ್ರವಾಸಿ ತಾಣವಾಗುವದರೊಂದಿಗೆ, ಸುತ್ತಮುತ್ತಲಿನ ಮಂದಿ ಬದುಕು ಕಟ್ಟಿಕೊಂಡಿದ್ದು, ಇದೀಗ ವಾಹನಗಳ ಓಡಾಟ, ಸಣ್ಣಪುಟ್ಟ ವ್ಯಾಪಾರ ಇತ್ಯಾದಿಯಲ್ಲಿ ತೊಡಗಿರುವವರೇ ಪ್ರವಾಸಿಗರಿಂದ ಅಧಿಕ ಹಣ ವಸೂಲಿ ಮೂಲಕ ಶಾಂತಿ ಕದಡುವಂತಾಗಿದೆ. ಈ ದಿಸೆಯಲ್ಲಿ ಸಂಬಂಧಪಟ್ಟವರು ಅತಿರೇಕಕ್ಕೆ ಹೋಗುವ ಮುನ್ನ ಕಾನೂನಾತ್ಮಕ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಪ್ರವಾಸಿಗರಿಗೂ ಮತ್ತು ಗ್ರಾಮ ನಿವಾಸಿಗಳ ಸಹಿತ ಎಲ್ಲರಿಗೆ ಭದ್ರತಾ ಕ್ರಮ ಕೈಗೊಳ್ಳುವ ಅಗತ್ಯವಿದೆ.
-ಶ್ರೀಸುತ.