ವೀರಾಜಪೇಟೆ, ನ. 22: ವಾಹನ ಸಂಚಾರದಲ್ಲಿ ಚಾಲಕರು ಕೆಲವು ನಿಯಮ ನಿಬಂಧನೆಗಳನ್ನು ಅಗತ್ಯವಾಗಿ ಪಾಲಿಸುವದರಿಂದ ರಸ್ತೆ ಅಪಘಾತ, ವಾಹನ ದುರಂತವನ್ನು ತಪ್ಪಿಸಬಹುದು. ವಾಹನ ಸುಗಮ ಸಂಚಾರಕ್ಕೆ ಆಯ್ದ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸುವಿಕೆ, ಇಲಾಖೆಯಲ್ಲಿ ಸಿಬ್ಬಂದಿ ಕೊರತೆ, ಜನಸಂಖ್ಯೆ ಒತ್ತಡ ಇರುವದನ್ನು ಜಾಗೃತಿ ಮೂಡಿಸಬೇಕಾಗಿದೆ ಎಂದು ಬೆಂಗಳೂರಿನ ಮೈಕ್ರೋ ಲೇಔಟ್ ಪೊಲೀಸ್ ಠಾಣೆಯ ಕಮ್ಯೂನಿಟಿ ಪೊಲೀಸಿಂಗ್ ಸಂಚಾಲಕ ಮಂಡೀರ ವೀವೆಕ್ ಚಂಗಪ್ಪ ಹೇಳಿದರು.

ವೀರಾಜಪೇಟೆ ಲಯನ್ಸ್ ಕ್ಲಬ್ ವತಿಯಿಂದ ಇಲ್ಲಿನ ಪುರಭವನದಲ್ಲಿ ಹಮ್ಮಿಕೊಂಡಿದ್ದ “ಟ್ರಾಫಿಕ್ ಸೇಫ್ಟಿ” “ಅಪರಾಧ ಮುನ್ನೆಚ್ಚರಿಕೆ” ವಿಷಯದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಚಾರ ಮಂಡಿಸಿದ ವೀವೆಕ್ ಚಂಗಪ್ಪ, ಚಾಲಕರು ಅಜಾಗರೂಕತೆಯಿಂದ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವದರಿಂದ ಶೇ. 30 ಕ್ಕೂ ಅಧಿಕ ವಾಹನ ಅಪಘಾತ ಸಂಭವಿಸುತ್ತಿವೆ. ಚಾಲಕರು ದೇಶದ ಜವಾಬ್ದಾರಿಯುತ ಪ್ರಜೆಗಳಾಗಿ ಧೂಮಪಾನ ಇತರ ದುಶ್ಚಟಗಳಿಂದ ದೂರವಿದ್ದರೆ ಪ್ರತಿಯೊಂದು ಹಂತದಲ್ಲಿಯೂ ಅಪಘಾತ ಶೂನ್ಯವಾಗಲಿದೆ ಎಂದರು

ಅತಿಥಿಯಾಗಿ ಭಾಗವಹಿಸಿದ್ದ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ಮಾತನಾಡಿ, ವಾಹನ ಅಪರಾಧದ ಕುರಿತು ಚಾಲಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು. ವಾಹನ ಚಾಲನೆಯ ಬಗ್ಗೆ ಕಾನೂನಿನ ಅರಿವಿದ್ದರೆ ಅಪರಾಧವನ್ನು ತಡೆಯಲು ಸಾಧ್ಯ. ವಿದ್ಯಾರ್ಥಿಗಳು ಇಂದು ಸಮಾಜಕ್ಕೆ ಮಾರಕವಾಗಿರುವ ಫೇಸ್‍ಬುಕ್, ವ್ಯಾಟ್ಸ್‍ಆಪ್ ಹಾಗೂ ದುಶ್ಚಟಗಳಿಂದ ದೂರವಿದ್ದರೆ ಆರೋಗ್ಯ ಕಾಪಾಡಿಕೊಂಡು ಭವಿಷ್ಯದ ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು.

ಉಪ ನಿರೀಕ್ಷಕ ಸಂತೋಷ್ ಕಶ್ಯಪ್ ಮಾತನಾಡಿ, ವಾಹನ ಚಾಲಕರುಗಳಿಗೆ ಕಾನೂನಿನ ಅರಿವಿದ್ದರೆ ಸುಗಮ ಸಂಚಾರಕ್ಕೆ ಆದ್ಯತೆ ನೀಡಿ ಅಪರಾಧಗಳ ಸಂಖ್ಯೆ ಕ್ಷೀಣಿಸಲಿವೆ ಎಂದು ಹೇಳಿದರು.

ಸಭೆಯನ್ನುದ್ದೇಶಿಸಿ ಮಾನವ ಹಕ್ಕು ಪರಿಷತ್‍ನ ಜಿಲ್ಲಾಧ್ಯಕ್ಷ ಪಳಂಗಂಡ ಪ್ರತಾಪ್ ಚಿಣ್ಣಪ್ಪ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್ ಮಾತನಾಡಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಪಟ್ಟಡ ವಿಕ್ರಂ ಚಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ವಾಹನ ಚಾಲಕರು ವಾಹನ ಚಾಲನೆಯ ನಿಯಮಗಳನ್ನು ಪಾಲಿಸಿದರೆ ಸುಗಮ ಸಂಚಾರದೊಂದಿಗೆ ವಾಹನ ಅಪಘಾತವನ್ನು ತಪ್ಪಿಸಬಹುದು. ಶಾಲಾ ಮಕ್ಕಳ ವಾಹನಗಳನ್ನು ಚಲಾಯಿಸುವವರು ರಸ್ತೆ ಸುರಕ್ಷತೆ ಬಗ್ಗೆ ವಿಶೇಷವಾಗಿ ತಿಳಿದುಕೊಂಡು ವಾಹನ ಚಾಲನೆ ಮಾಡುವಂತಾಗಬೇಕು ಎಂದರು.

ಕ್ಲಬ್‍ನ ಕಾರ್ಯದರ್ಶಿ ಬಲ್ಲಚಂಡ ಅಶ್ವಥ್ ಗಣಪತಿ ಅತಿಥಿಗಳ ಪರಿಚಯ ಮಾಡಿದರು. ವಿಕ್ರಂ ಚಂಗಪ್ಪ ಸ್ವಾಗತಿಸಿದರೆ, ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ವಂದಿಸಿದರು.