ಸೋಮವಾರಪೇಟೆ, ನ.10: ಆತಂಕದ ವಾತಾವರಣವಿದ್ದ ಚನ್ನಬಸಪ್ಪ ಸಭಾಂಗಣದೊಳಗೆ ನಡೆಯುತ್ತಿದ್ದ ಟಿಪ್ಪು ಜಯಂತಿಗೆ ಮೂರು ಕಡೆಗಳಿಂದ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರ ತಂತ್ರವನ್ನು ಪೊಲೀಸರು ವಿಫಲಗೊಳಿಸಿ, ಟಿಪ್ಪು ಜಯಂತಿ ಕಾರ್ಯಕ್ರಮವನ್ನು ನಡೆಸಲು ಅನುವು ಮಾಡಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಹಾಗೂ ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಅವರನ್ನು ಪೊಲೀಸರು ಸಭಾಂಗಣದಿಂದ ಹೊತ್ತೊಯ್ಯುವ ಮೂಲಕ ಕೆಲಕಾಲ ಗದ್ದಲ ಗೊಂದಲ ಏರ್ಪಟ್ಟರೂ ನಂತರ ಸಭಿಕರ ಸ್ಥಾನದಲ್ಲಿದ್ದವರನ್ನೇ ಅತಿಥಿಗಳನ್ನಾಗಿಸಿ ಟಿಪ್ಪು ಜಯಂತಿ ನಡೆಸಲಾಯಿತು.ತಾಲೂಕು ಆಡಳಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಸಿದ್ದತೆ ಕೈಗೊಳ್ಳಲಾಗಿತ್ತು.
(ಮೊದಲ ಪುಟದಿಂದ) ನಿಗದಿತ ಸಮಯ 10.30ಕ್ಕೆ ಆಗಮಿಸಿದ ಅತಿಥಿಗಳು ವೇದಿಕೆಯ ಮೇಲೆ ಕುಳಿತಿದ್ದರು. ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ವಸತಿ ನಿಲಯದ ವಿದ್ಯಾರ್ಥಿಗಳು ಗಣಪತಿ ಹಾಡಿನ ಮೂಲಕ ಪ್ರಾರ್ಥಿಸಿ, ನಂತರ ನಾಡ ಗೀತೆ ಹಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಾಗಿದ್ದ ಶಾಸಕ ಅಪ್ಪಚ್ಚು ರಂಜನ್ ಅವರು ಗೈರಾಗಿದ್ದರಿಂದ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯುಕುಮಾರ್ ಅವರನ್ನು ಅಧ್ಯಕ್ಷರನ್ನಾಗಿಸಲಾಗಿತ್ತು. ಇನ್ನೇನು ಕಾರ್ಯಕ್ರಮವನ್ನು ಉದ್ಘಾಟಿಸಬೇಕೆನ್ನುವಷ್ಟರಲ್ಲಿ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷರೂ ಆಗಿರುವ ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಅವರು, ಪ್ರೊಟೋಕಾಲ್ ಪ್ರಕಾರ ಸಂಸದರ ಹೆಸರನ್ನು ಯಾಕೆ ಮುದ್ರಿಸಿಲ್ಲ ಎಂದು ಪ್ರಶ್ನಿಸಿದರು.
ವೇದಿಕೆಯಲ್ಲಿದ್ದ ತಾಲೂಕು ತಹಶೀಲ್ದಾರ್ ಮಹೇಶ್ ಪ್ರತಿಕ್ರಿಯಿಸಿ ಜಿಲ್ಲಾಡಳಿತದಿಂದ ನಿರ್ದೇಶನ ಬಂದ ಹಿನ್ನೆಲೆ ಹೆಸರು ಮುದ್ರಿಸಿಲ್ಲ ಎಂದರು. ನಿರ್ದೇಶನದ ಪ್ರತಿ ನೀಡಿ ಎಂದು ಅಭಿಮನ್ಯು ಪಟ್ಟು ಹಿಡಿದರು. ನಂತರ ಮೈಕ್ ಹಿಡಿದ ತಾ.ಪಂ. ಉಪಾಧ್ಯಕ್ಷರು, ಟಿಪ್ಪು ಓರ್ವ ಮತಾಂಧ. ಆತ ಕೊಡಗಿನ ಮೇಲೆ ಧಾಳಿ ನಡೆಸಿ ಅಮಾಯಕರ ಮೇಲೆ ದೌರ್ಜನ್ಯ ಎಸಗಿದ್ದಾನೆ. ಆತನೊಬ್ಬ ಮುಸ್ಲಿಂ ಎಂಬ ಕಾರಣಕ್ಕೆ ವಿರೋಧಿಸುತ್ತಿಲ್ಲ. ಕೊಡಗಿನಲ್ಲಿ ಮಾಡಿದ ಅನಾಚಾರ, ನರಮೇಧ, ಮತಾಂತರ, ದೌರ್ಜನ್ಯಗಳಿಂದಾಗಿ ವಿರೋಧಿಸುತ್ತಿದ್ದೇವೆ. ಸರ್ಕಾರ ಶಿಶುನಾಳ ಷರೀಫರು, ಅಬ್ದುಲ್ ಕಲಾಂ ಜಯಂತಿ ಮಾಡಿದರೆ ನಾವೇ ಮುಂದೆ ನಿಂತು ಆಚರಿಸುತ್ತೇವೆ ಎಂದರು.
ಈ ಸಂದರ್ಭ ಸಭಾಂಗಣದಲ್ಲಿ ಆಸೀನರಾಗಿದ್ದ ಕಾಂಗ್ರೆಸ್ ಮುಖಂಡರಾದ ತಾ.ಪಂ. ಸದಸ್ಯ ಬಿ.ಬಿ. ಸತೀಶ್, ಹಾನಗಲ್ಲು ಗ್ರಾ.ಪಂ. ಉಪಾಧ್ಯಕ್ಷ ಮಿಥುನ್, ಬೇಳೂರು ಗ್ರಾ.ಪಂ. ಸದಸ್ಯ ಕೆ.ಎ. ಯಾಕೂಬ್, ಸದಸ್ಯೆ ಮಂಜುಳಾ ಹರೀಶ್ ಅವರುಗಳು ಎದ್ದು ನಿಂತು, ಸರ್ಕಾರಿ ಕಾರ್ಯಕ್ರಮದಲ್ಲಿ ಸರ್ಕಾರದ ವಿರುದ್ಧವೇ ಮಾತನಾಡುತ್ತಿರುವದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಈ ಸಂದರ್ಭ ದಿಢೀರ್ ವೇದಿಕೆಗೆ ನುಗ್ಗಿದ, ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಪೊಲೀಸ್ ಇನ್ಸ್‍ಪೆಕ್ಟರ್ ಬಿ.ಎನ್. ಅಶೋಕ್ ಮತ್ತು ಇತರರು ಅಭಿಮನ್ಯುಕುಮಾರ್ ಅವರನ್ನು ಎಳೆದರು. ಇವರಿಂದ ಬಿಡಿಸಿಕೊಳ್ಳಲೆತ್ನಿಸಿದ ಸಂದರ್ಭ ಇತರ ಪೊಲೀಸರೂ ಬಂದು ಹಿಡಿಯಲೆತ್ನಿಸಿದರು. ಈ ಸಂದರ್ಭ ಕೆಳಬಿದ್ದ ಅಭಿಮನ್ಯುಕುಮಾರ್ ಕುಳಿತಲ್ಲಿಂದಲೇ ಸರ್ಕಾರ ಹಾಗೂ ಟಿಪ್ಪು ಜಯಂತಿ ವಿರೋಧಿ ಘೋಷಣೆ ಕೂಗಿದರು.
ಈ ಬೆಳವಣಿಗೆಯಿಂದ ಸಭಾಂಗಣದೊಳಗೆ ಉಪಸ್ಥಿತರಿದ್ದ ಬಿಜೆಪಿ ಜನಪ್ರತಿನಿಧಿಗಳು ಕಪ್ಪು ಪಟ್ಟಿ ಪ್ರದರ್ಶಿಸುತ್ತಾ ಪೊಲೀಸರತ್ತ ನುಗ್ಗಿದರು. ಅಭಿಮನ್ಯು ಅವರನ್ನು ಎಳೆದಾಡಿದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯೆ ಪೂರ್ಣಿಮಾ ಗೋಪಾಲ್, ತಾ.ಪಂ. ಸದಸ್ಯೆ ತಂಗಮ್ಮ, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ ಅವರುಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ವೇದಿಕೆಯ ಮುಂಭಾಗವೇ ಧರಣಿ ಕುಳಿತರು.
ವೇದಿಕೆಯಿಂದ ಕೆಳಗಿಳಿಯುವಂತೆ ಪೊಲೀಸರು ಮನವಿ ಮಾಡಿದರೂ ಜಗ್ಗದ ಪ್ರತಿನಿಧಿಗಳು ಕಾಂಗ್ರೆಸ್ ಸರ್ಕಾರ ಹಾಗೂ ಟಿಪ್ಪು ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು. ನಂತರ ಅಭಿಮನ್ಯು ಅವರನ್ನು ವೇದಿಕೆಯಿಂದ ಕೆಳಗೆ ಇಳಿಸುವ ಸಂದರ್ಭ ನೆಲಕ್ಕೆ ಬಿದ್ದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ಜನಪ್ರತಿನಿಧಿಗಳು ಪೊಲೀಸರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಟಿಪ್ಪು ಜಯಂತಿಗೆ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು, ಮಾಜೀ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಭಾವಚಿತ್ರ ಪ್ರದರ್ಶಿಸಿ, ಕಲಾಂ ಜಯಂತಿ ಆಚರಿಸುವಂತೆ ಆಗ್ರಹಿಸಿದರು. ಈ ಸಂದರ್ಭ ಹಾನಗಲ್ಲು ಗ್ರಾ.ಪಂ. ಸದಸ್ಯ ಪ್ರಕಾಶ್, ಚೌಡ್ಲು ಗ್ರಾ.ಪಂ. ಸದಸ್ಯ ಧರ್ಮ, ಬೇಳೂರು ಗ್ರಾ.ಪಂ. ಸದಸ್ಯ ಸಂತೋಷ್‍ಕುಮಾರ್ ಸೇರಿದಂತೆ ಇತರರು ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಅಭಿಮನ್ಯುಕುಮಾರ್ ಅವರ ಕೈ-ಕಾಲುಗಳನ್ನು ಹಿಡಿದ ನಾಲ್ಕೈದು ಪೊಲೀಸರು ಸಭಾಂಗಣದಿಂದ ಹೊರಗೆ ಎತ್ತಿಕೊಂಡು ಬಂದು ಪೊಲೀಸ್ ವಾಹನದೊಳಗೆ ಕುಳ್ಳಿರಿಸಿದರು. ಸಭಾಂಗಣದ ಒಳಗಿದ್ದ ಪ್ರತಿಭಟನಾಕಾರರನ್ನೂ ವಶಕ್ಕೆ ಪಡೆದು ವಾಹನಕ್ಕೆ ತುಂಬಿಸಿದರು.
ಟಿಪ್ಪು ಜಯಂತಿ ಆಚರಣೆ: ಅತಿಥಿಗಳ ವಿರೋಧ ಹಾಗೂ ಬಂಧನದ ನಂತರ ಸಭಾಂಗಣದಲ್ಲಿ ಟಿಪ್ಪು ಜಯಂತಿ ಆಚರಿಸಲಾಯಿತು. ತಾ.ಪಂ. ಸದಸ್ಯ ತಾಕೇರಿ ಸತೀಶ್, ಹಾನಗಲ್ಲು ಗ್ರಾ.ಪಂ. ಉಪಾಧ್ಯಕ್ಷ ಮಿಥುನ್, ಬೇಳೂರು ಗ್ರಾ.ಪಂ. ಸದಸ್ಯರುಗಳಾದ ಕೆ.ಎ. ಯಾಕೂಬ್, ಮಂಜುಳಾ ಹರೀಶ್ ಅವರುಗಳು ದೀಪ ಬೆಳಗಿಸಿ, ಟಿಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ತಾಲೂಕು ತಹಸೀಲ್ದಾರ್ ಮಹೇಶ್ ಹಾಗೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಅವರುಗಳು ಮಾತನಾಡಿ ‘ಸರ್ಕಾರಿ ಕಾರ್ಯಕ್ರಮವಾಗಿ ಟಿಪ್ಪು ಜಯಂತಿ ಆಚರಿಸಲಾಗುತ್ತಿದ್ದು, ಎಲ್ಲರಿಗೂ ಟಿಪ್ಪು ಜಯಂತಿ ಶುಭಾಶಯಗಳು’ ಎಂದು ಮಾತು ಮುಗಿಸಿದರು.
ತಾಕೇರಿ ಸತೀಶ್ ಮಾತನಾಡಿ, ‘ಸರಿಯಾಗಿ ಇತಿಹಾಸ ನನಗೂ ಗೊತ್ತಿಲ್ಲ. ಅವರಿಗೂ ಗೊತ್ತಿಲ್ಲ. ಪಾಠದಲ್ಲಿ ಮೈಸೂರು ಹುಲಿ ಎಂದು ಹೇಳಲಾಗಿದೆ. ಸರ್ಕಾರ ಆಚರಿಸುತ್ತಿರುವ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸುವ ಕ್ರಮವನ್ನು ಖಂಡಿಸುತ್ತೇವೆ. ಮುಂದಿನ ಬಾರಿಯ ಟಿಪ್ಪು ಜಯಂತಿಗೆ ಎಲ್ಲಾ ಜನಪ್ರತಿನಿಧಿಗಳಿಗೂ ಆಹ್ವಾನ ನೀಡಿ ವಿಜೃಂಭಣೆಯಿಂದ ಆಚರಿಸಬೇಕು’ ಎಂದರು.
ಬೇಳೂರು ಗ್ರಾ.ಪಂ. ಸದಸ್ಯ ಯಾಕೂಬ್ ಮಾತನಾಡಿ, ‘ಟಿಪ್ಪುವಿನ ಒಳ್ಳೆ ಕೆಲಸ ಮರೆಮಾಚಿ ಕೆಲವನ್ನು ಮಾತ್ರ ವೈಭವೀಕರಿಸಿ ರಾಜಕೀಯ ಮಾಡುವದು ಸರಿಯಲ್ಲ. ದೇವಾಲಯ ಮುರಿದಿರುವದಕ್ಕೆ ದಾಖಲೆಯಿಲ್ಲ. ದೇಣಿಗೆ ನೀಡಿರುವದಕ್ಕೆ ದಾಖಲೆ ಇದೆ. ಸ್ವಾತಂತ್ರ್ಯಕ್ಕಾಗಿ ಎರಡು ಮಕ್ಕಳನ್ನೂ ಅಡವಿಟ್ಟ ವ್ಯಕ್ತಿ. ಇವರ ಇತಿಹಾಸ ಅಧ್ಯಯನ ಮಾಡಿಯೇ ಜಯಂತಿ ಆಚರಿಸಲಾಗುತ್ತಿದೆ. ಇಷ್ಟ ಇಲ್ಲದಿದ್ರೆ ಬರಬಾರದು. ಸರ್ಕಾರಿ ಕಾರ್ಯಕ್ರಮಕ್ಕೆ ವಿರೋಧಿಸುವದು ಖಂಡನೀಯ’ ಎಂದರು.
ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ ಲಕ್ಷ್ಮಿಕಾಂತ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ, ತಾಲೂಕು ಕಚೇರಿಯ ಅರುಣ್‍ಕುಮಾರ್ ಅವರುಗಳು ಉಪಸ್ಥಿತರಿದ್ದರು. ಒಟ್ಟಾರೆ ಧಿಕ್ಕಾರದ ಘೋಷಣೆ, ಗದ್ದಲ, ಗೊಂದಲ, ತಳ್ಳಾಟ ನೂಕಾಟದ ನಡುವೆ 3ನೇ ವರ್ಷದ ಟಿಪ್ಪು ಜಯಂತಿಯನ್ನು ಸೋಮವಾರಪೇಟೆಯಲ್ಲಿ ಆಚರಿಸಲಾಯಿತು.