ಮಡಿಕೇರಿ, ನ. 4: ಪೊಲೀಸ್ ಠಾಣೆಯಲ್ಲಿ ದಾಖಲಾದ 4 ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊನ್ನಂಪೇಟೆ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳು ವಿಚಾರಣೆಗೆ ಹಾಜರಾಗದೇ ತಲೆಮರೆಸಿ ಕೊಂಡಿದ್ದು, ನ್ಯಾಯಾಲಯಗಳಲ್ಲಿ ಪ್ರಕರಣಗಳು ವಿಲೇವಾರಿಯಾಗದೇ ಉಳಿದಿತ್ತು. ಈ ಸಂಬಂಧ ಜಿಲ್ಲಾ ಪೊಲೀಸ್ ಅಧೀಕ್ಷಕರು ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ತಮ್ಮ ಪೊಲೀಸ್ ಠಾಣಾ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಗಳನ್ನು ಪತ್ತೆ ಮಾಡಿ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು.

ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಪೊನ್ನಂಪೇಟೆ ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಯವರು ತಮ್ಮ ಠಾಣೆಯ 4 ಪ್ರಕರಣಗಳಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.

ಆರೋಪಿಗಳ ಪೈಕಿ ಎಂ. ಮಹಮ್ಮದ್ (48) ತಂದೆ ಸಾದಾಲಿ ಬೆಮ್ಮತ್ತಿ, ಧನುಗಾಲ, ಈತ 6 ವರ್ಷದಿಂದ ತಲೆಮರೆಸಿಕೊಂಡಿದ್ದ. ಎರಡನೇ ಆರೋಪಿ ಬೆಟ್ಟಕುರುಬರ ಕಾಳ (32) ತಂದೆ ಲೇ: ಚಾಂಡ, ತಾರಿಕಟ್ಟೆ, ತಿತಿಮತಿ. ಹಾಲಿ ವಾಸ ಹಟ್ಟಿಹೊಳೆ. 8 ವರ್ಷದಿಂದ ತಲೆಮರೆಸಿಕೊಂಡಿದ್ದ. ಮೂರನೇ ಆರೋಪಿ ಪಣಿಯರವರ ಅಪ್ಪಿ ಯಾನೆ ಅಪ್ಪು (24) ತಂದೆ ಅಣ್ಣು, ಬೇಗೂರು ಗ್ರಾಮ, ಪೊನ್ನಂಪೇಟೆ, ಈತ 13 ವರ್ಷದಿಂದ ತಲೆಮರೆಸಿಕೊಂಡಿದ್ದ. ನಾಲ್ಕನೇ ಆರೋಪಿ ಎಂ. ದಿಲೀಪ್ (65) ತಂದೆ ಲೇ: ಎಂ.ಬಿ. ಅಯ್ಯಣ್ಣ, ಬಾಳೆಲೆ, ಹಾಲಿ ವಾಸ ಮೇಲಾಹಳ್ಳಿ, ಕೆಆರ್ ಪುರಂ, ಬೆಂಗಳೂರು ಈತ ಅಬಕಾರಿ ಇಲಾಖೆ ಪ್ರಕರಣದಲ್ಲಿ 6 ವರ್ಷದಿಂದ ತಲೆಮರೆಸಿಕೊಂಡಿದ್ದ.

ಪೊನ್ನಂಪೇಟೆ ಪೊಲೀಸ್ ಠಾಣಾ ಉಪನಿರೀಕ್ಷಕ ಬಿ.ಜಿ. ಮಹೇಶ್, ಎಎಸ್‍ಐ ಹೆಚ್.ವೈ. ಚಂದ್ರ ಹಾಗೂ ಸಿಬ್ಬಂದಿಗಳಾದ ಎಂ.ಡಿ. ಮನು, ಹರೀಶ್ ಕುಮಾರ್, ಬಿ.ಎನ್. ಸುಬ್ರಮಣಿ, ಸುಗಂದ ಇವರುಗಳು ಹಿರಿಯ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಅವರು ಈ ತಂಡಕ್ಕೆ ನಗದು ಬಹುಮಾನ ಘೋಷಿಸಿದ್ದಾರೆ.