ಕೂಡಿಗೆ, ಅ. 30: ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಸೀಗೆಹೊಸೂರು, ಬ್ಯಾಡಗೊಟ್ಟ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಕಾಡಾನೆಗಳು ಬೆಳೆಗಳನ್ನು ನಾಶ ಪಡಿಸುತ್ತಿವೆ. ಇದರಿಂದ ಈ ವ್ಯಾಪ್ತಿಯ ಜನರು ಭಯಬೀತರಾಗಿದ್ದಾರೆ.

ಬಾಣವಾರ ಅರಣ್ಯದಂಚಿನಿಂದ ಧಾವಿಸುತ್ತಿರುವ ಕಾಡಾನೆಗಳು ಬ್ಯಾಡಗೊಟ್ಟ ಗ್ರಾಮದ ಅಣ್ಣಯ್ಯ ಎಂಬವರ ಜಮೀನಿನಲ್ಲಿ ಬೆಳೆಯಲಾಗಿದ್ದ ಜೋಳವನ್ನು ತಿಂದು ನಷ್ಟಪಡಿಸಿವೆ. ಸೀಗೆಹೊಸೂರು ವ್ಯಾಪ್ತಿಯಲ್ಲಿಯೂ ಸಹ ರೈತರು ಬೆಳೆದಿದ್ದ ಬಾಳೆ, ಗೆಣಸು ಬೆಳೆಗಳನ್ನು ತಿಂದು ತುಳಿದು ನಾಶಪಡಿಸಿವೆ.

ರಾತ್ರಿ ವೇಳೆ ಕಾಡಾನೆಗಳು ಓಡಾಡುತ್ತಿರುವ ಹಿನ್ನೆಲೆಯಲ್ಲಿ ಬ್ಯಾಡಗೊಟ್ಟ ಕೇಂದ್ರದಲ್ಲಿರುವ ಆದಿವಾಸಿಗಳು ಭಯಬೀತರಾಗಿ ಗುಡಿಸಲುಗಳತ್ತ ಓಡಿರುವ ಘಟನೆ ಸಂಭವಿಸಿದೆ. ಸಂಬಂಧಪಟ್ಟ ಇಲಾಖೆ ಯವರು ಆನೆಗಳು ಗ್ರಾಮಗಳತ್ತ ಬರುವದನ್ನು ತಪ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಪಡಿಸಿದ್ದಾರೆ.