ವೀರಾಜಪೇಟೆ, ಅ. 23: ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಈಚೆಗೆ ಪಟ್ಟಣ ಪಂಚಾ ಯಿತಿ ವ್ಯಾಪ್ತಿಯಲ್ಲಿ ಬರುವ ಏಳು ದಶಕ ಗಳಿಂದಲೂ ಅಧಿಕವಾಗಿರವ ಜಾಗದಲ್ಲಿ ಕಟ್ಟಡಗಳನ್ನು ಕಟ್ಟಬೇಕಾದರೆ ಭೂ ಪರಿವರ್ತನೆ ಕಡ್ಡಾಯ ಎಂದಿರುವದು ಅವೈಜ್ಞಾನಿಕ ಆದೇಶ, ಆದ್ದರಿಂದ ಪಟ್ಟಣ ಪಂಚಾಯಿತಿಯಲ್ಲಿರುವ ಭೂ ಮಾಲೀಕರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಪಟ್ಟಣ ಪಂಚಾಯಿತಿಯ ಹಿರಿಯ ಸದಸ್ಯ ಹಾಗೂ ಜೆ.ಡಿ.ಎಸ್. ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಎಸ್. ಹೆಚ್. ಮತೀನ್ ತಿಳಿಸಿದ್ದು, ಸರಕಾರ ಆದೇಶ ಹಿಂಪಡೆಯಲು ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಬೆಂಗಳೂರು, ಮೈಸೂರು, ದಾವಣಗೆರೆ, ಹುಬ್ಬಳ್ಳಿಯಂತಹ ಮಹಾನಗರಗಳ ವ್ಯಾಪ್ತಿಗೆ ಅನ್ವಯ ವಾಗುವಂತೆ ಈ ಆದೇಶ ಜಾರಿಗೆ ಬರಬೇಕಾಗಿದೆ. ಆದರೆ ಪಟ್ಟಣ ಪಂಚಾಯಿತಿ ಮಟ್ಟದಲ್ಲಿ ಕಡು ಬಡವರು, ವಸತಿ ರಹಿತರು, ಮಧ್ಯಮ ವರ್ಗದವರು ಮನೆಗಳನ್ನು ಕಟ್ಟ ಬೇಕಾದರೆ ಈ ಆದೇಶ ಅಡಚಣೆಯಾಗಲಿದೆ. ಪಟ್ಟಣ ಪಂಚಾಯಿತಿಯ ವ್ಯಾಪ್ತಿಗೆ ಬರುವ ಜಾಗಕ್ಕೆ ಆರು ತಿಂಗಳ ಹಿಂದೆ ಮುಕ್ತ ವಾಗಿ ಕಟ್ಟಡ ಕಟ್ಟುವ ಪರವಾನಗಿಯನ್ನು ನೀಡಲಾಗುತ್ತಿತ್ತು. ಈ ಹೊಸ ಆದೇಶದಿಂದ ಪಟ್ಟಣ ಪಂಚಾಯಿತಿ ಕಳೆದ ಆರು ತಿಂಗಳುಗಳಿಂದ ಸುಮಾರು 95 ಕಟ್ಟಡ ಕಟ್ಟುವ ಅರ್ಜಿಗಳಿಗೆ ಪರವಾನಗಿ ನೀಡದೆ ಹಿಂದಕ್ಕೆ ಕಳಿಸಿರುವದರಿಂದ ಪಂಚಾಯಿತಿ ಆದಾಯಕ್ಕೂ ಕೊಡಲಿ ಪೆಟ್ಟು ಬಿದ್ದಂತಾಗಿದೆ ಎಂದು ದೂರಿದರು.

ಜೆ.ಡಿ.ಎಸ್. ಪಕ್ಷದ ರಾಜ್ಯ ಸಮಿತಿ ಸದಸ್ಯ ಎಸ್.ಹೆಚ್. ಮೈನುದ್ದೀನ್ ಮಾತನಾಡಿ, ಕೊಡಗಿನಲ್ಲಿ ಕೃಷಿ ಭೂಮಿಗೆ ಮಾತ್ರ ಈ ಭೂಪರಿರ್ತನೆ ಕಾಯಿದೆ ಅನ್ವಯ ವಾಗುತ್ತಿದೆ. ಪಟ್ಟಣ ಪಂಚಾಯಿತಿಯಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಂತಹ ಜಾಗಕ್ಕೆ ಭೂ ಪರಿವರ್ತನೆ ಅನ್ವಯ ವಾಗುವದಿಲ್ಲ. ಈಗ ಪಟ್ಟಣ ಪಂಚಾಯಿತಿಗೆ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಹೊರಡಿಸಿರುವ ಆದೇಶ ತಪ್ಪು ತಿಳುವಳಿಕೆಯಿಂದ ಕೂಡಿದ್ದು ಬಡವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಸರಕಾರದ ಈ ಆದೇಶದಿಂದ ಮನೆ ಕಟ್ಟುವ ಭೂ ಮಾಲೀಕರು ಕಂಗಾಲಾಗಿದ್ದಾರೆ, ಈಗ ಪಟ್ಟಣ ಪಂಚಾಯಿತಿ ಜಾಗದ ಭೂ ಪರಿವರ್ತನೆ ಕಷ್ಟ ಸಾಧ್ಯ ಎಂದು ಹೇಳಿದರು.

ಪಕ್ಷದ ನಗರ ಸಮಿತಿ ಅಧ್ಯಕ್ಷ ಪಿ.ಎ. ಮಂಜುನಾಥ್ ಮಾತನಾಡಿ, ಈ ಅವೈಜ್ಞಾನಿಕ ಆದೇಶದ ಸಂಬಂಧದಲ್ಲಿ ಈಗಾಗಲೇ ಪಟ್ಟಣ ಪಂಚಾಯಿತಿಯ ಭೂ ಮಾಲೀಕರು ಸರಕಾರಕ್ಕೆ ಅನೇಕ ಮನವಿಗಳನ್ನು ಸಲ್ಲಿಸಿದ್ದಾರೆ. ಮನವಿಯನ್ನು ಪುರಸ್ಕರಿಸಿ ಹೊಸ ಆದೇಶ ಹೊರಡಿಸಲು ನಗರಾಭಿವೃದ್ಧಿ ಸಚಿವರು ಮುಂದಾಗಬೇಕು.

ಈಗಾಗಲೇ ಕಟ್ಟಡ ಪರವಾನಗಿ ನಿರೀಕ್ಷಿಸಿ ಬ್ಯಾಂಕ್ ಸಾಲ ಮಂಜೂರು ಮಾಡಿಸಿಕೊಂಡವರ ಮನೆ ಸಾಲವು ಹಿಂದಿರುಗಿರುವದು ಭೂಮಾಲೀಕರ ವಿಪರ್ಯಾಸ ಎಂದರಲ್ಲದೆ ಆದೇಶ ಹಿಂಪಡೆಯಲು ಆಗ್ರಹಿಸಿದರು.

ಗೋಷ್ಠಿಯಲ್ಲಿ ಪಕ್ಷದ ಅಮ್ಮಂಡ ವಿವೇಕ್, ಚಿಲ್ಲವಂಡ ಗಣಪತಿ ಉಪಸ್ಥಿತರಿದ್ದರು.