ಮಡಿಕೇರಿ, ಅ. 21 : ವಿಯೆಟ್ನಾಂ ಕಾಳು ಮೆಣಸು ಆಮದು ಪ್ರಕರಣದಲ್ಲಿ ಬೆಳೆÉಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದ ಆರೋಪವನ್ನು ಎದುರಿಸುತ್ತಿರುವ ಗೋಣಿಕೊಪ್ಪ ಎಪಿಎಂಸಿ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡುವ ಮೂಲಕ ಕೊಡಗಿನ ಬೆಳೆಗಾರರಿಗೆ ನ್ಯಾಯ ಒದಗಿಸಬೇಕೆಂದು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಮಿನ್ ಮೊಹಿಸಿನ್, ಆಮದು ವ್ಯವಹಾರದಿಂದಾಗಿ ಕಾಳು ಮೆಣಸಿನ ಬೆಲೆ ಶೇ.43 ರಷ್ಟು ಕುಸಿದಿದ್ದು, ಬೆಳೆÉಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿ.ಪಂ ಸಾಮಾನ್ಯ ಸಭೆಯಲ್ಲಿ ಇಂತಹ ಗಂಭೀರ ವಿಚಾರದ ಬಗ್ಗೆ ನಿರ್ಣಯ ಕೈಗೊಳ್ಳದೆ ತಪ್ಪಿತಸ್ಥರನ್ನು ರಕ್ಷಿಸುವ ಪ್ರಯತ್ನ ಮಾಡಲಾಗಿದೆ ಎಂದು ಟೀಕಿಸಿದ ಅವರು, ಬೆಳೆÉಗಾರರು ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆಂದು ತಿಳಿಸಿದರು. ಕಾಳು ಮೆಣಸು ಆಮದಾಗುವದನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿದರು.

ಟಿಪ್ಪು ಜಯಂತಿ ವಿರುದ್ಧ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ನಿರ್ಣಯ ಕೈಗೊಂಡಿರುವದನ್ನು ಖಂಡಿಸುವದಾಗಿ ತಿಳಿಸಿದ ಅವರು, ಜಿಲ್ಲಾಡಳಿತ ಯಾವದೇ ಒತ್ತಡಕ್ಕೆ ಮಣಿಯಬಾರದೆಂದರು. ಟಿಪ್ಪು ಜಯಂತಿಯನ್ನು ನಾಲ್ಕು ಗೋಡೆಗಳ ಮಧ್ಯೆ ಆಚರಣೆ ಮಾಡಬಾರದು ಮತ್ತು ಸಾರ್ವಜನಿಕರಿಗೆ ನಿರ್ಬಂಧ ಹೇರಬಾರದೆಂದು ಆಗ್ರಹಿಸಿದ ಅಮಿನ್ ಮೊಹಿಸಿನ್, ಜಿ.ಪಂ ನಿರ್ಣಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕೆಂದು ತಿಳಿಸಿದರು.

ಉಪಾಧ್ಯಕ್ಷ ಎಂ.ಎಂ. ಲಿಯಾಖತ್ ಆಲಿ ಮಾತನಾಡಿ, ಕಾಳು ಮೆಣಸು ಆಮದು ವ್ಯವಹಾರ ಆಕ್ರಮಣದ ರೀತಿಯಲ್ಲಿ ಕೊಡಗಿನ ಕೃಷಿ ಕ್ಷೇತ್ರದ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯದರ್ಶಿ ಅಬ್ದುಲ್ ಅಡ್ಕಾರ್ ಮಾತನಾಡಿ, ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಸಂಸದರು ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಯಾವದೇ ಪ್ರಸ್ತಾಪ ಮಾಡುತ್ತಿಲ್ಲ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯರಾದ ಪೀಟರ್, ಮನ್ಸೂರ್ ಹಾಗೂ ಎಸ್‍ಡಿಪಿಐ ಪ್ರಮುಖ ಹುರೇರ ಉಪಸ್ಥಿತರಿದ್ದರು.