ಗೋಣಿಕೊಪ್ಪಲು, ಅ. 20 : ಹೆಗ್ಗಡೆ ಸಮಾಜಕ್ಕೆ ಉದ್ಯೋಗ ಹಾಗೂ ಶಿಕ್ಷಣಕ್ಕೆ ಪ್ರವರ್ಗ 2 ಎ ಅಡಿಯಲ್ಲಿ ಕಲ್ಪಿಸಿರುವ ಮೀಸಲಾತಿಯನ್ನು ರಾಜಕೀಯ ಕ್ಷೇತ್ರಕ್ಕೂ ವಿಸ್ತರಿಸುವಂತೆ ಹೋರಾಟ ನಡೆಸುವ ನಿರ್ಧಾರವನ್ನು ಬಿಟ್ಟಂಗಾಲ ಹೆಗ್ಗಡೆ ಸಮಾಜ ಸಭಾಂಗಣದಲ್ಲಿ ನಡೆದ ಮಹಾಸಭೆ ಯಲ್ಲಿ ತೆಗೆದುಕೊಳ್ಳಲಾಯಿತು.

ಕೊಡಗು ಹೆಗ್ಗಡೆ ಸಮಾಜ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆದು, ಸರ್ಕಾರವನ್ನು ಎಚ್ಚರಿಸುವ ಕೆಲಸಕ್ಕೆ ಕಾರ್ಯಪ್ರವೃತ ್ತರಾಗುವಂತೆ ನಿರ್ಧರಿಸಲಾಯಿತು.

2006 ರಿಂದಲೇ ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಾ ಬಂದಿದ್ದರೂ ಸರ್ಕಾರದಿಂದ ಸ್ಪಂದನೆ ದೊರೆತಿಲ್ಲ. ಇದರಿಂದಾಗಿ ಈ ಬಾರಿ ಸರ್ಕಾರಕ್ಕೆ ಹೆಚ್ಚು ಒತ್ತಡ ತರಲು ಕಾರ್ಯಪ್ರವೃತ್ತರಾಗುವಂತೆ ಯೋಜನೆ ರೂಪಿಸಲು ನಿರ್ಧರಿಸಲಾಯಿತು. ಸಮಾಜದ ಅಭಿವೃದ್ಧಿಗೆ ನಡೆಸಬಹುದಾದ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭ ಹೆಗ್ಗಡೆ ಸಮಾಜ ಉಪಾಧ್ಯಕ್ಷ ಕೊರಕುಟ್ಟೀರ ಸರಾ ಚೆಂಗಪ್ಪ, ಕಾರ್ಯದರ್ಶಿ ಚಂಗಚಂಡ ಕಟ್ಟಿ ಕಾರ್ಯಪ್ಪ, ಖಜಾಂಜಿ ಪಾನಿಕುಟ್ಟೀರ ಕುಟ್ಟಪ್ಪ, ಕ್ರೀಡಾ ಮತ್ತು ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಪಡಿಞರಂಡ ಪ್ರಭುಕುಮಾರ್, ನಿರ್ದೇಶಕರುಗಳಾದ ಚರ್ಮಂಡ ಪೂವಯ್ಯ, ತೋರೇರ ಮುದ್ದಯ್ಯ ಉಪಸ್ಥಿತರಿದ್ದರು.