ಶ್ರೀಮಂಗಲ, ಅ. 9: ಬಿರುನಾಣಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರನ್ನು ನೇಮಿಸಬೇಕು. 15 ದಿನದೊಳಗೆ ಕ್ರಮ ಕೈಗೊಳ್ಳದಿದ್ದರೆ ಅನಿರ್ದಿಷ್ಟ ಕಾಲ ಪ್ರತಿಭಟನೆಯನ್ನು ಆರೋಗ್ಯ ಕೇಂದ್ರದ ಎದುರು ನಡೆಸುವದಾಗಿ ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ಬಿಟ್ಟಿಯಂಡ ತಂಬಿ ನಾಣಯ್ಯ ಎಚ್ಚರಿಸಿದ್ದಾರೆ.

ಗ್ರಾ.ಪಂ. ಸಭಾಂಗಣದಲ್ಲಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದ ಅವರು, ಗ್ರಾಮೀಣ ಭಾಗವಾಗಿರುವ ಬಿರುನಾಣಿಯು ಜಿಲ್ಲಾ ಕೇಂದ್ರದಿಂದ 110 ಕಿ.ಮೀ. ತಾಲೂಕು ಕೇಂದ್ರ ವೀರಾಜಪೇಟೆಯಿಂದ 65 ಕಿ.ಮೀ. ಅಂತರದಲ್ಲಿದೆ. ಬಿರುನಾಣಿಗೆ ಸಮೀಪ ಬೇರೆ ಯಾವದೇ ಸರಕಾರಿ ಆರೋಗ್ಯ ಕೇಂದ್ರಗಳಿಲ್ಲ. ರೈತರು, ಕೂಲಿ ಕಾರ್ಮಿಕರು ಹೆಚ್ಚಾಗಿರುವ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಜನರಿಗೆ ಆರೋಗ್ಯ ಸಮಸ್ಯೆಗೆ ಚಿಕಿತ್ಸೆಗಾಗಿ ದೂರದ ಗೋಣಿಕೊಪ್ಪ ಅಥವಾ ಇತರೆಡೆ ತೆರಳುವದು ಕಷ್ಟವಾಗಿದೆ. ಆದ್ದರಿಂದ ಬಿರುನಾಣಿ ಆರೋಗ್ಯ ಕೇಂದ್ರಕ್ಕೆ ಕೂಡಲೆ ಖಾಯಂ ವೈದ್ಯರನ್ನು ನೇಮಿಸುವಂತೆ ಒತ್ತಾಯಿಸಿದ್ದಾರೆ.

ಸಭೆಯಲ್ಲಿ ಗ್ರಾಮಸ್ಥರಾದ ಬಲ್ಯಮೀದೇರಿರ ನಾಚಪ್ಪ, ಅಣ್ಣೀರ ಪೊನ್ನಪ್ಪ, ಕಳಕಂಡ ಕಾಂತಿ, ಬಲ್ಯಮೀದೇರಿರ ಸುರೇಶ್, ಕರ್ತಮಾಡ ಜಾಜಿ, ಕಳಕಂಡ ಸರೋಜ, ಸಾವಿತ್ರಿ ಹಾಜರಿದ್ದರು.