ಸೋಮವಾರಪೇಟೆ, ಅ.9: ಸಮಾಜದಲ್ಲಿ ನಿರಂತರ ಅಶಾಂತಿ ಸೃಷ್ಟಿಸಿ ಜಾತಿಗಳ ನಿಂದನೆಯಲ್ಲಿ ತೊಡಗಿರುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳ ಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೋಮವಾರಪೇಟೆ ಠಾಣಾಧಿಕಾರಿ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಇಲ್ಲಿನ ಒಕ್ಕಲಿಗರ ವೇದಿಕೆ, ಗೌಡ ಸೇನೆ ಮತ್ತು ಜಯಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ಪೊಲೀಸ್ ಠಾಣೆಗೆ ತೆರಳಿದ ಪದಾಧಿಕಾರಿಗಳು, ಹೊರ ರಾಜ್ಯದಿಂದ ಬಂದಿರುವ ಸಮಾಜಘಾತುಕ ಶಕ್ತಿಗಳು, ಕ್ರಿಮಿನಲ್ ಚಟುವಟಿಕೆಯೊಂದಿಗೆ ಇಲ್ಲಿನ ಮೂಲನಿವಾಸಿಗಳ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ನಿನ್ನೆ ಇಲ್ಲಿನ ಒಕ್ಕಲಿಗರ ಭವನದಲ್ಲಿ ನಡೆದ ಓಣಂ ಉತ್ಸವದಲ್ಲಿ ಪಾಲ್ಗೊಂಡು, ರಾತ್ರಿಯಾಗುತ್ತಿದ್ದಂತೆ ಕೆಲ ಪುಂಡರು ಮದ್ಯಸೇವಿಸಿ ಒಕ್ಕಲಿಗರ ಜನಾಂಗದ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. ತಾಲೂಕಿನಲ್ಲಿ ಬಹು ಸಂಖ್ಯಾತರಾಗಿರುವ ಒಕ್ಕಲಿಗರ ಮೇಲೆ ಕೇರಳದಿಂದ ಬಂದಿರುವ ಕೆಲ ಪುಂಡರ ಗುಂಪು ಹಲ್ಲೆ ನಡೆಸುತ್ತಿದೆ ಎಂದು ಒಕ್ಕಲಿಗರ ವೇದಿಕೆಯ ಗೌಡಳ್ಳಿ ಪೃಥ್ವಿ, ಕಿಬ್ಬೆಟ್ಟ ಮಧು ಆರೋಪಿಸಿದರು.

ಮೂಲ ನಿವಾಸಿಗಳಾದ ಒಕ್ಕಲಿಗ ಜನಾಂಗದವರು ಎಲ್ಲಾ ಜಾತಿ ಜನಾಂಗದವರನ್ನು ಗೌರವದಿಂದ ಕಾಣುತ್ತಿದ್ದು, ಕೇರಳ ರಾಜ್ಯದಿಂದ ಬಂದು ಐಗೂರು ಹಾಗೂ ಸೋಮವಾರಪೇಟೆ ಪಟ್ಟಣದಲ್ಲಿ ವಾಸವಿರುವ ಕೆಲ ಪುಂಡರು, ಒಕ್ಕಲಿಗ ಜನಾಂಗದವರ ವಿರುದ್ಧ ಬಹಿರಂಗ ವಾಗಿ ಅವಹೇಳನ ಕಾರಿಯಾಗಿ ಮಾತನಾಡುತ್ತಿದ್ದಾರೆ. ಮುಂದೆ ಅನಾಹುತವಾಗುವದರೊಳಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಶಿವಾಜಿ ಸೇನೆ ಹೆಸರಿನಲ್ಲಿ ಪುಂಡಾಟ ನಡೆಯುತ್ತಿದ್ದು, ಅದನ್ನು ನಿಷೇಧಿಸಬೇಕು. ಇಲ್ಲಿನ ಕಕ್ಕೆಹೊಳೆ ಸಮೀಪ ಕ್ಲಬ್ ಹೆಸರಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ಈ ಬಗ್ಗೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಐಗೂರಿನಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ನಡೆಯುತ್ತಿದೆ. ಮರಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಕೂಲಿಗೆ ಬಂದವರು ಮಾಲಿಕರ ಮೇಲೆ ಹಲ್ಲೆಗೆ ಯತ್ನಿಸುತ್ತಿರುವ ಘಟನೆಗಳು ನಡೆಯುತ್ತಿವೆ ಎಂದು ಕಿರಗಂದೂರು ನಿತೀನ್ ಆರೋಪಿಸಿದರು.

ಈ ಸಂದರ್ಭ ಒಕ್ಕಲಿಗರ ವೇದಿಕೆಯ ನತೀಶ್ ಮಂದಣ್ಣ, ಮಸಗೋಡು ಸತೀಶ್, ಗಾಂಧಿ, ದೇವಿಪ್ರಸಾದ್, ಶರತ್‍ಚಂದ್ರ, ಗೌಡ ಸೇನೆಯ ಪಿ. ಮಧು, ರುದ್ರಪ್ಪ, ಚಕ್ರವರ್ತಿ ಸುರೇಶ್, ಮಸಗೋಡು ದಯಾನಂದ್, ಹಾನಗಲ್ ಮಿಥುನ್, ಐಗೂರು ರಾಯ್, ಜಯಕರ್ನಾಟಕ ಸಂಘಟನೆಯ ರಫೀಕ್, ಮಹೇಶ್, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

ಕಾನೂನು ಮೀರಿದ್ರೆ ಕಠಿಣ ಕ್ರಮ-ಶಿವಣ್ಣ: ಸಂಘಟನೆಗಳ ಪ್ರಮುಖರಿಂದ ಮನವಿ ಸ್ವೀಕರಿಸಿದ ನಂತರ ಮಾತನಾಡಿದ ಪೊಲೀಸ್ ಠಾಣಾಧಿಕಾರಿ ಎಂ. ಶಿವಣ್ಣ, ಸಮಾಜದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ, ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವದು. ಕಾನೂನಿಗೆ ಎಲ್ಲರೂ ಒಂದೇ. ನಿನ್ನೆ ನಡೆದ ಘಟನೆಯ ಚಿತ್ರೀಕರಣ ಸಿಸಿಟಿವಿಯಲ್ಲಿ ದಾಖಲಾಗಿದೆ. ಕಾನೂನು ಮೀರಿದವರ ಬಗ್ಗೆ ಸಾಕ್ಷಿ ಸಿಗಲಿದೆ. ಯಾವದೇ ಮುಲಾಜಿಲ್ಲದೇ ಕ್ರಮ ಜರುಗಿಸುತ್ತೇವೆ. ಸಮಾಜದಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ನಮಗೆ ಮಾಹಿತಿ ಕೊಡಿ ಎಂದರು.