ಶ್ರೀಮಂಗಲ, ಅ. 9: ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಹೈಸೊಡ್ಲೂರು ಗ್ರಾಮದ ರೈತರೋರ್ವರ ಕೆರೆಗೆ ವಿಷ ಬೆರೆಸಿ ಮೀನುಗಳ ಮಾರಣ ಹೋಮ ನಡೆದಿರುವ ಬಗ್ಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಗ್ರಾಮದ ಚೇಂದಿರ ದೇವಯ್ಯ (ಡೇನಿ) ಅವರ ಕೆರೆಗೆ ವಿಷ ಬೆರೆಸಿದ ಹಿನ್ನಲೆಯಲ್ಲಿ ಲಕ್ಷಾಂತರ ಮೌಲ್ಯದ ರೋವು, ಕಾಟ್ಲ, ಐಮೀನುಗಳಂತಹ ಉತ್ತಮ ಜಾತಿಯ ಮೀನುಗಳ ಮಾರಣ ಹೋಮ ನಡೆದಿದೆ. ಈ ಮೀನುಗಳನ್ನು ಸಾಕಾಣಿಕೆ ಮಾಡ ಲಾಗುತಿತ್ತು. ಕೆರೆ ತುಂಬಾ ಮೀನುಗಳು ಸತ್ತು ತೇಲಾಡುತ್ತಿರುವ ದೃಶ್ಯ ಕಂಡು ಬಂದಿದೆ. ಪಕ್ಕದ ಗದ್ದೆಯ ಹುಲ್ಲು ಒಣಗಲು ಔಷದಿ ಸಿಂಪಡಿಸಿರುವ ಮಾಲೀಕರ ಅಜಾಗರೂಕತೆಯಿಂದ ಕೆರೆಗೆ ಈ ಔಷಧಿ ಬೆರೆಕೆಯಾಗಿದೆ. ಇದರಿಂದ ಲಕ್ಷಾಂತರ ಮೌಲ್ಯದ ಮೀನುಗಳು ಸಾಯಲು ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಕೆಲ ತಿಂಗಳ ಹಿಂದೆ ಹಾಲು ಕರೆಯುವ ಮೂರು ತಿಂಗಳ ಕರು ಸಹ ಹುಲ್ಲಿಗೆ ಮದ್ದು ಸಿಂಪಡನೆ ಮಾಡಿರುವದರಿಂದ, ಹುಲ್ಲನ್ನು ತಿಂದು ಸಾವಿಗೀಡಾಗಿದೆ ಎಂದು ದೂರಿನಲ್ಲಿ ನಮೂದಿಸಿರುವ ರೈತ ಚೇಂದಿರ ದೇವಯ್ಯ ಅವರು, ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಂಡು ನಷ್ಟವನ್ನು ತುಂಬಿ ಕೊಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.