ಮಡಿಕೇರಿ, ಅ. 9 : ರಾಜ್ಯ ಕಾಂಗ್ರೆಸ್ ಸರಕಾರ ರೈತರ ಸಾಲವನ್ನು ಮನ್ನಾ ಮಾಡುವ ಮೂಲಕ ಜನಪರ ಕಾಳಜಿಯ ಸರಕಾರವೆಂದು ಜನಪ್ರಿಯತೆಯನ್ನು ಗಳಿಸಿದೆ. ಆದರೆ ರೈತರ ಬಗ್ಗೆ ಕಾಳಜಿಯೇ ಇಲ್ಲದ ಕೇಂದ್ರದ ಬಿಜೆಪಿ ಸರಕಾರ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ಕೃಷಿ ಸಾಲವನ್ನು ಮನ್ನಾ ಮಾಡದೆ ಬೂಟಾಟಿಕೆಯ ಸರಕಾರ ಎನ್ನುವದನ್ನು ಸಾಬೀತು ಪಡಿಸಿದೆ ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಟೀಕಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಪ್ರತಾಪ್ ಸಿಂಹ ಅವರ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಗೊಂದಲಮಯ ಹೇಳಿಕೆಗಳನ್ನು ನೀಡುತ್ತಿರುವ ಸಂಸದರ ವರ್ತನೆ ಬಗ್ಗೆ ಬಿಜೆಪಿ ಕಾರ್ಯಕರ್ತರೇ ಅಸಮಾಧಾನಗೊಂಡಿದ್ದಾರೆ ಎಂದು ಆರೋಪಿಸಿದರು.
ಅಪರೂಪಕ್ಕೊಮ್ಮೆ ವೀರಾಜಪೇಟೆ ತಾಲೂಕಿಗೆ ಮಾತ್ರ ಬಂದು ಹೋಗುವ ಸಂಸದರು ಮಡಿಕೇರಿ ಕ್ಷೇತ್ರಕ್ಕೆ ಭೇಟಿಯೇ ನೀಡುತ್ತಿಲ್ಲ. ಚುನಾವಣೆಯ ಸಂದರ್ಭದಲ್ಲಿ ಕೇವಲ ಭರವಸೆಗಳನ್ನಷ್ಟೇ ನೀಡಿದ ಪ್ರತಾಪಸಿಂಹ ಗೆದ್ದ ನಂತರ ಕೊಡಗನ್ನು ಪೂರ್ತಿಯಾಗಿ ಮರೆತು ಬಿಟ್ಟಿದ್ದಾರೆ. ಈ ಹಿಂದೆ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಹೆಚ್.ವಿಶ್ವನಾಥ್ ಅವರು ಸಂಸದರಾಗಿ ಉತ್ತಮ ಕಾರ್ಯಗಳನ್ನು ಮಾಡಿದ್ದರೂ ವಿನಾಕಾರಣ ಆರೋಪಗಳನ್ನು ಮಾಡುತ್ತಿದ್ದವರು ಇದೀಗ ಪ್ರತಾಪಸಿಂಹರ ಕಾರ್ಯವೈಖರಿ ಬಗ್ಗೆ ಯಾಕೆ ಮೌನವಾಗಿದ್ದಾರೆ ಎಂದು ವೀಣಾಅಚ್ಚಯ್ಯ ಪ್ರಶ್ನಿಸಿದರು.
ಹಟ್ಟಿ ಹಮಿಯಾಲ ಗ್ರಾಮದಲ್ಲಿ ‘ನಮ್ಮ ಗ್ರಾಮ ನಮ್ಮ ರಸ್ತೆ’ ಕಾಮಗಾರಿಯು ರಾಜ್ಯ ಸರಕಾರದ ಅನುದಾನದಿಂದ ನಡೆಯುತ್ತಿದೆ. ಆದರೆ ಈ ಗ್ರಾಮ ಎಲ್ಲಿದೆ ಎಂದೇ ತಿಳಿಯದ ಸಂಸದ ಪ್ರತಾಪಸಿಂಹರ ಅನುದಾನ ಬಳಕೆಯಾಗುತ್ತಿದೆ ಎನ್ನುವ ತಪ್ಪು ಅಭಿಪ್ರಾಯವನ್ನು ಮೂಡಿಸಲಾಗುತ್ತಿದೆ ಎಂದು ಅವರು ಟೀಕಿಸಿದರು.
ಮುಂದಿನ ತಿಂಗಳು ಸಿಎಂ ಆಗಮನ
ಅನೇಕ ಜನಪರ ಕಾರ್ಯಕ್ರಮಗಳ ಮೂಲಕ ರಾಜ್ಯದಲ್ಲಿ ಜನಪ್ರಿಯತೆಯನ್ನು ಗಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಯಲ್ಲಿ ಕೂಡ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ನವೆಂಬರ್ ತಿಂಗಳಿನಲ್ಲಿ ಕೊಡಗು ಜಿಲ್ಲೆಗೆ ಆಗಮಿಸುವ ಮುಖ್ಯಮಂತ್ರಿಗಳು ಭಾಗಮಂಡಲದ ಮೇಲು ಸೇತುವೆ ಕಾಮಗಾರಿ
(ಮೊದಲ ಪುಟದಿಂದ) ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ವೀಣಾಅಚ್ಚಯ್ಯ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಂ ಅವರು ಅಭಿವೃದ್ಧಿಯ ಹರಿಕಾರರಾಗಿದ್ದು, ಜಿಲ್ಲೆಯ ಅನೇಕ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ವಿಶೇಷ ಪ್ಯಾಕೇಜ್ ಅನುದಾನದ ಮೂಲಕ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸ್ಪಂದಿಸಿದ್ದಾರೆ. ಪ್ಯಾಕೇಜ್ ಹಣ ಬಿಡುಗಡೆಯಾಗಿಲ್ಲವೆಂದು ಶಾಸಕರು ಮಾಡುತ್ತಿರುವ ಟೀಕೆ ಸರಿಯಲ್ಲ. ಅನುದಾನವನ್ನು ಸರಕಾರ ಬಿಡುಗಡೆ ಮಾಡಿದ್ದು, ಮಳೆಯ ಕಾರಣದಿಂದ ರಸ್ತೆ ದುರಸ್ತಿ ಕಾರ್ಯ ವಿಳಂಬವಾಗಿದೆ. ಮಲೆನಾಡು ಅಭಿವೃದ್ಧಿ ಯೋಜನೆಯ ಶೇ.60 ರಷ್ಟು ಅನುದಾನವನ್ನು ಉಸ್ತುವಾರಿ ಸಚಿವರು ಗ್ರಾಮೀಣ ರಸ್ತೆಗಳಿಗಾಗಿಯೇ ಮೀಸಲಿಟ್ಟಿದ್ದಾರೆ ಎಂದು ವೀಣಾಅಚ್ಚಯ್ಯ ಸಮರ್ಥಿಸಿಕೊಂಡರು.
ನಾಪಂಡ ಮುತ್ತಪ್ಪ ಅವರು ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿರುವದು ಅವರ ವೈಯುಕ್ತಿಕ ಅಭಿಪ್ರಾಯವಾಗಿದೆ ಎಂದು ಅಭಿಪ್ರಾಯಪಟ್ಟ ವೀಣಾ ಹೈಕಮಾಂಡ್ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ ಎಂದರು. ತಾವು ವಿಧಾನಸಭಾ ಚುನಾವಣೆಯ ಸ್ಪರ್ಧಾಕಾಂಕ್ಷಿಯಲ್ಲವೆಂದು ಸ್ಪಷ್ಟಪಡಿಸಿದರು.
ರಾಜೀನಾಮೆ ನೀಡಲಿ
ವಿಯೆಟ್ನಾಂ ಕಾಳುಮೆಣಸು ಆಮದು ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಣಿಕೊಪ್ಪ ಎಪಿಎಂಸಿ ಆಡಳಿತ ಮಂಡಳಿ ಜಿಲ್ಲೆಯ ಬೆಳೆಗಾರರಿಗೆ ಹಾಗೂ ರೈತಾಪಿ ವರ್ಗಕ್ಕೆ ಅನ್ಯಾಯ ಮಾಡಿದ್ದು, ಇದೊಂದು ಕ್ಷಮಿಸಲಾಗದ ಅಪರಾಧವಾಗಿದೆ ಎಂದು ವೀಣಾಅಚ್ಚಯ್ಯ ಆರೋಪಿಸಿದರು.
ಗೋದಾಮಿನಲ್ಲೇ ಕಲಬೆರಕೆ ನಡೆಯುತ್ತಿದ್ದರೂ ಗಮನಕ್ಕೆ ಬಂದಿಲ್ಲವೆಂದು ಹೇಳಿಕೊಳ್ಳುತ್ತಿರುವ ಆಡಳಿತ ಮಂಡಳಿ ರಾಜೀನಾಮೆ ನೀಡಿ ಚುನಾವಣೆಯನ್ನು ಎದುರಿಸಲಿ ಎಂದು ಅವರು ಸವಾಲು ಹಾಕಿದರು. ಭ್ರಷ್ಟಾಚಾರಿಗಳು ಆಡಳಿತ ನಡೆಸಲು ಶಾಸಕರುಗಳು ಕೂಡ ಬಿಡಬಾರದು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷರುಗಳಾದ ಮಿಟ್ಟುಚಂಗಪ್ಪ, ಕೆ.ಎಂ.ಇಬಾಹಿಂ ಹಾಗೂ ಮಹಿಳಾ ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷರಾದ ಜಿ.ಆರ್.ಪುಷ್ಪಲತಾ ಉಪಸ್ಥಿತರಿದ್ದರು.