ಮಡಿಕೇರಿ, ಅ. 9: ವಿಯೆಟ್ನಾಂ ದೇಶದ ಕಳಪೆ ಕರಿಮೆಣಸನ್ನು ಆಮದು ಮಾಡಿ ಕಲಬೆರಕೆ ವಹಿವಾಟು ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರೊಂದಿಗೆ ಚರ್ಚೆ ನಡೆಸಲಿರುವದಾಗಿ ಕೇಂದ್ರದ ಕಾನೂನು ಸಚಿವರಾದ ಡಿ.ವಿ. ಸದಾನಂದ ಗೌಡ ಅವರು ತಿಳಿಸಿದ್ದಾರೆ.ಕುಶಾಲನಗರದಲ್ಲಿ ‘ಶಕ್ತಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಕುರಿತು ಮಾಹಿತಿ ನೀಡಿದರು.
ಸದ್ಯದಲ್ಲಿ ತಾವು ವಾಣಿಜ್ಯ ಸಚಿವರೊಂದಿಗೆ ಖುದ್ದಾಗಿ ಚರ್ಚಿಸಲಿರುವದಾಗಿ ಹೇಳಿದ ಅವರು ಅಗತ್ಯ ಬಿದ್ದರೆ ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚುರಂಜನ್ ಸೇರಿದಂತೆ ಬೆಳೆಗಾರರ ಸಂಘದ ಪದಾಧಿಕಾರಿಗಳ ಸಹಿತ ನಿಯೋಗ ಕರೆದೊಯ್ಯುವದಾಗಿ ತಿಳಿಸಿದರು. ಕಳಪೆ ಕರಿಮೆಣಸು ಆಮದು ಆಗದ ರೀತಿಯಲ್ಲಿ ಸೂಕ್ತ ಕ್ರಮ ವಹಿಸಿ ಇದನ್ನು ನಿಯಂತ್ರಿಸಲಾಗುವದು. ಈ ಹಿಂದೆ ಅಡಿಕೆ ವಿಚಾರದಲ್ಲೂ ಇದೇ ರೀತಿಯ ಪ್ರಸಂಗ ಎದುರಾಗಿತ್ತು. ಮಲೇಷಿಯಾ ಮತ್ತಿತರ ರಾಷ್ಟ್ರಗಳಿಂದ ಗುಣಮಟ್ಟ ಇಲ್ಲದ ಅಡಿಕೆಯನ್ನು ಆಮದು ಮಾಡಿಕೊಂಡು ಇಲ್ಲಿನ ಅಡಿಕೆಯೊಂದಿಗೆ ಬೆರೆಸಿ ಮಾರಾಟ ಮಾಡಲಾಗುತ್ತಿತ್ತು. ಈ ಸಂದರ್ಭವೂ ಗಂಭೀರ ಹೋರಾಟ ನಡೆದು ಆಮದು ನೀತಿಯನ್ನು ಕಠಿಣಗೊಳಿಸುವ ಮೂಲಕ ಇದನ್ನು ತಡೆಹಿಡಿಯುವಲ್ಲಿ ಯಶಸ್ಸು ಕಾಣಲಾಗಿತ್ತು. ಅದೇ ರೀತಿ ಕರಿಮೆಣಸು ವಿಚಾರದಲ್ಲೂ ಕಠಿಣ ನಿರ್ಧಾರಕ್ಕೆ ಬರಲಾಗುವದು ಎಂದು ಅವರು ತಿಳಿಸಿದರು.
ವಾಣಿಜ್ಯ ಇಲಾಖೆಯಿಂದ ತನಿಖೆ
ಪ್ರಸ್ತುತ ನಡೆದಿರುವ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ವಾಣಿಜ್ಯ ಇಲಾಖೆಯ ಮೂಲಕವೂ ತನಿಖೆ ನಡೆಸಲಾಗುವದು ಎಂದು ಸಚಿವರು ಹೇಳಿದರು.
ಸುಲಲಿತವಾಗಿ ಅಭ್ಯರ್ಥಿಗಳ ಆಯ್ಕೆ
ಬಿಜೆಪಿ ಪಕ್ಷಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು ಮುಂಬರಲಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಎರಡು ಕ್ಷೇತ್ರಗಳಿಗೆ ಸುಲಲಿತವಾಗಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪಕ್ಷದ ಕೇಂದ್ರ ಸಮಿತಿಯ ತೀರ್ಮಾನ ಅಂತಿಮವಾಗಲಿದೆ. ಈ ಬಗ್ಗೆ ಕೇಂದ್ರದಿಂದಲೂ ಸೂಚನೆ ಇದೆ. ಪಕ್ಷದ ಪ್ರಥಮ ಏಕಧ್ಯೇಯ ಪಕ್ಷವನ್ನು ಗೆಲ್ಲಿಸುವದು, ಟಿಕೆಟ್ ಯಾರಿಗೆ ಎಂಬದನ್ನು ಕೇಂದ್ರ ನಿರ್ಧರಿಸಲಿದೆ. ಟಿಕೆಟ್ ವಿಚಾರದಲ್ಲಿ ರಾಷ್ಟ್ರೀಯ ಅಧ್ಯಕ್ಷರು ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ ಸೇರಿದಂತೆ ಪಂಚರಾಜ್ಯಗಳ ಚುನಾವಣೆಯಲ್ಲಿ ಕೆಲವೊಂದು ಮಾನದಂಡಗಳನ್ನು ಅನುಸರಿಸಿದ್ದರು. ಈ ಬಾರಿ ರಾಜ್ಯದಲ್ಲೂ ಇದೇ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಬಿಜೆಪಿ ಗೆಲ್ಲಬೇಕು ಎಂಬದಷ್ಟೇ ಗುರಿ ಎಂದರು.
ಭದ್ರಕೋಟೆ ಮುರಿಯಲು ಸಾಧ್ಯವಿಲ್ಲ
ಕೊಡಗು ಜಿಲ್ಲೆ ಬಿಜೆಪಿಗೆ ಫಲವತ್ತಾದ ಜಿಲ್ಲೆಯಾಗಿದ್ದು, ಇದು ಪಕ್ಷದ ಭದ್ರಕೋಟೆ, ಇದನ್ನು ಮುರಿಯಲು ಸಾಧ್ಯವಿಲ್ಲ. ಕೊಡಗು ದೇಶಪ್ರೇಮ ಹಾಗೂ ಸಂಸ್ಕøತಿ- ಸಂಸ್ಕಾರಕ್ಕೆ ಹೆಸರಾದ ಜಿಲ್ಲೆ. ಇದು ಬಿಜೆಪಿ ಪಕ್ಷದ ಧ್ಯೇಯೋದ್ದೇಶಕ್ಕೂ ಪೂರಕವಾಗಿದೆ ಎಂದು ಸದಾನಂದ ಗೌಡರು ಹೇಳಿದರು.
ಇಬ್ಬರು ಶಾಸಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು ಅಧಿಕಾರ ಇರಲಿ, ಇಲ್ಲದಿರಲಿ ಶಾಸಕರು ಜಿಲ್ಲೆಯ ಹಿತಾಸಕ್ತಿಗೆ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ಹಾಗೂ ಇತರ ಸಾಧಕ - ಬಾಧಕದ ವಿಚಾರವನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಜನಪ್ರತಿನಿಧಿ ಎಂಬದಕ್ಕಿಂತ ಕೊಡಗಿನ ರಕ್ಷಕರಂತೆ ಕೆಲಸ ಮಾಡಿದ್ದಾರೆ. ಇದರೊಂದಿಗೆ ಮೋದಿ ಸರಕಾರದ ಸಾಧನೆಯಯೂ ಇದು ಪಕ್ಷದ ಗೆಲುವಿಗೆ ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಪಕ್ಷದಲ್ಲಿ ಒಂದಷ್ಟು ಗೊಂದಲ - ಭಿನ್ನಾಭಿಪ್ರಾಯಗಳು ಇರುವದು ಸಹಜ. ಇದೀಗ ಎಲ್ಲವೂ ಬಗೆಹರಿದಿದೆ. ವಿಸ್ತಾರಕ್ ಕಾರ್ಯಕ್ರಮದ ಮೂಲಕ ಹಲವಷ್ಟು ಹಿರಿಯರನ್ನು ಮಾತನಾಡಿಸುವ ಪ್ರಯತ್ನ ಮಾಡಲಾಗಿದೆ. ಕಳೆದ ಒಂದು ವಾರದಿಂದ ಪಂಚಾಯಿತಿ ಮಟ್ಟಕ್ಕೆ ಪ್ರಮುಖರು ತಂಡವಾಗಿ ಪ್ರವಾಸ ಕೈಗೊಳ್ಳುತ್ತಿದ್ದು, ಬಿಜೆಪಿ ಒಗ್ಗಟ್ಟಾಗಿದೆ ಎಂದು ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಉಸ್ತುವಾರಿಯೂ ಆಗಿರುವ ಸದಾನಂದ ಗೌಡ ಅವರು ಹೇಳಿದರು.