ಕುಶಾಲನಗರ, ಸೆ. 28: ಕುಶಾಲನಗರ ಸಮೀಪದ ಸೀಗೆಹೊಸೂರು ಗ್ರಾಮದ ತೋಟಗಾರಿಕೆ ಇಲಾಖೆಗೆ ಸೇರಿದ ಜಾಗವನ್ನು ಪ್ರಭಾವಿಗಳು ಅಕ್ರಮವಾಗಿ ಒತ್ತುವರಿ ಮಾಡಿದ್ದು ತಕ್ಷಣ ತೆರವುಗೊಳಿಸುವಂತೆ ಮದಲಾಪುರದ ಸಾಮಾಜಿಕ ಹೋರಾಟಗಾರ ಜಿ.ಎಲ್. ನಾರಾಯಣ ಒತ್ತಾಯಿಸಿದ್ದಾರೆ.

ಕುಶಾಲನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸೀಗೆಹೊಸೂರಿನಲ್ಲಿ ತೋಟಗಾರಿಕಾ ಇಲಾಖೆಗೆ ಸೇರಿದ ಸರ್ವೆ ನಂ 13/1/ಪಿ 1 ರ ಪೈಕಿ 100 ಎಕರೆ ಜಾಗದಲ್ಲಿ ಅಧಿಕಾರಿ ಗಳ ನಿರ್ಲಕ್ಷ್ಯದಿಂದ 80 ಕ್ಕೂ ಅಧಿಕ ಎಕರೆ ಪ್ರದೇಶ ಖಾಸಗಿ ವ್ಯಕ್ತಿಗಳ ಪಾಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರಕಾರದ ಆಸ್ತಿ ಖಾಸಗಿ ಪರಭಾರೆಯಾಗಿದ್ದು ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿರುವ ಅವರು, ಈ ಬಗ್ಗೆ ಲೋಕಾಯುಕ್ತ ಮತ್ತು ರಾಜ್ಯಪಾಲರಿಗೆ ದೂರು ನೀಡಲಾಗುವದು ಎಂದಿದ್ದಾರೆ.

ಈ ಹಿಂದೆ ತನಿಖಾ ಸಂದರ್ಭ ರೆವೆನ್ಯು ಅಧಿಕಾರಿಗಳು ಮೂಲ ದಾಖಲಾತಿಗಳಿಲ್ಲದಿದ್ದರೂ ನೋಟರೀಕೃತ ಜೆರಾಕ್ಸ್ ಪ್ರತಿಗಳ ಮೂಲಕ ಇಂತಹ ಅವ್ಯವಹಾರಗಳನ್ನು ಮಾಡಿದ್ದಾರೆ. ಇತ್ತೀಚೆಗೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಯಾವದೇ ತನಿಖಾ ವರದಿ ಪರಿಗಣಿಸದೆ ತೋಟಗಾರಿಕಾ ಇಲಾಖೆಗೆ ವರದಿಯೊಂದನ್ನು ನೀಡಿದ್ದಾರೆ. ಮೊದಲೇ ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕಾಗಿ ಪತ್ರ ಮೂಲಕ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ತಕ್ಷಣ ಸರಕಾರಿ ಇಲಾಖೆಗೆ ಸೇರಿದ 100 ಎಕರೆ ಜಾಗ ಉಳಿಸಿಕೊಡಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಶ್ರಮಿಸಬೇಕು. ನಕಲಿ ದಾಖಲೆಗಳನ್ನು ಮತ್ತು ನೋಟರೀಕೃತ ದಾಖಲೆಗಳನ್ನು ರದ್ದುಪಡಿಸಿ ಅಕ್ರಮಕ್ಕೆ ಸಹಕರಿಸಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.