ಮಡಿಕೇರಿ, ಸೆ. 27: ಸೇನೆ ಹಾಗೂ ಕ್ರೀಡೆಯಲ್ಲಿ ಪ್ರಸಿದ್ಧಿ ಪಡೆದಿರುವ ಕೊಡಗು ಜಿಲ್ಲೆಯು ಪ್ರಸಕ್ತ ಪ್ರವಾಸೋದ್ಯಮದಲ್ಲಿ ವೇಗವಾಗಿ ಬೆಳೆಯುತ್ತಿದ್ದು, ಈ ದಿಸೆಯಲ್ಲಿ ಎಲ್ಲರು ಒಗ್ಗೂಡಿ ಅಭಿವೃದ್ಧಿ ಸಾಧಿಸಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ನುಡಿದರು.ಪ್ರವಾಸೋದ್ಯಮ ಅಭಿವೃದ್ಧಿ ಜೊತೆಗೆ ಪರಿಸರ ಸಮತೋಲನ ಕಾಪಾಡುವದು ಅತ್ಯಗತ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಗರದ ಕ್ರಿಸ್ಟಲ್‍ಹಾಲ್‍ನಲ್ಲಿ ಬುಧವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೊಡಗು ಸೇನೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಆದ ಅತ್ಯುನ್ನತ ಸ್ಥಾನ ಹೊಂದಿದೆ. ಜೊತೆಗೆ ಕಾಫಿಗೆ ಹೆಸರಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮವು ಸಹ ಬಹು ವೇಗವಾಗಿ ಬೆಳೆಯುತ್ತಿದೆ ಎಂದು ನೆನಪಿಸಿದರು.

ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ ಸೇವೆಗಳು ಉತ್ತಮವಾಗಿವೆ. ಜೊತೆಗೆ ಪ್ರವಾಸೋದ್ಯಮದಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳು ದೊರೆಯುತ್ತಿವೆ. ಇವುಗಳ ಜೊತೆಗೆ ಇನ್ನಷ್ಟು ಮೂಲಸೌಲಭ್ಯ ಕಲ್ಪಿಸುವತ್ತ ಗಮನಹರಿಸಬೇಕಿದೆ ಎಂದರಲ್ಲದೆ, ಕೊಡಗು ಜಿಲ್ಲೆ ಸಮೃದ್ಧಿ ಹೊಂದಿದ್ದರೂ ಸಹ ಬಡತನ ರೇಖೆಗಿಂತ ಕೆಳಗಿರುವದನ್ನು ಮೇಲೆತ್ತಲು ಪ್ರಯತ್ನಿಸಬೇಕಿದೆ. ಬಡವರ ಜೀವನ

(ಮೊದಲ ಪುಟದಿಂದ) ಮಟ್ಟ ಸುಧಾರಣೆಗೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ಹೇಳಿದರು.

ಅಭಿವೃದ್ಧಿ ಜೊತೆಗೆ ಸ್ವಚ್ಚತೆ, ಪರಿಸರ ಶುಚಿತ್ವ ಹಾಗೂ ಕಸ ವಿಲೇವಾರಿಯತ್ತ ವಿಶೇಷ ಗಮನಹರಿಸಬೇಕಿದೆ. ಶ್ರೀಸಾಮಾನ್ಯರು, ಸ್ಥಳೀಯರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಟ್ಟುಗೂಡಿದಾಗ ಮಾತ್ರ ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲೆ ಅಭಿವೃದ್ಧಿಯತ್ತ ಸಾಗುತ್ತಿದ್ದರೂ ಸಹ ಇಚ್ಚಾಶಕ್ತಿ ಕೊರತೆಯಿಂದ ರಾಜಾಸೀಟಿನ ಫೌಂಟೈನ್ ಹಾಗೂ ಅಬ್ಬಿ ಜಲಪಾತದ ತೂಗುಸೇತುವೆ ಸರಿಪಡಿಸಲು ಸಾಧ್ಯವಾಗಿಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಮಾತನಾಡಿ ಜಿಲ್ಲೆಯಲ್ಲಿ ರಾಜಾಸೀಟು, ಮಾಂದಾಲ್ ಪಟ್ಟಿ ಪ್ರೇಕ್ಷಣೀಯ ಸ್ಥಳಗಳು, ಅಬ್ಬಿ, ಚೇಲಾವರ, ಇರ್ಫು, ಮಲ್ಲಹಳ್ಳಿ ಜಲಪಾತಗಳು, ಹೀಗೆ ನಾನಾ ಪ್ರವಾಸಿ ಸ್ಥಳಗಳಿವೆ. ಈ ಸ್ಥಳಗಳಲ್ಲಿ ಪ್ರವಾಸಿಗರಿಗೆ ಸೂಕ್ತ ಮೂಲ ಸೌಲಭ್ಯಗಳು ಇವೆಯೇ ಎಂಬುದರ ಬಗ್ಗೆ ಅವಲೋಕನ ಮಾಡಬೇಕಿದೆ. ಆದರೆ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ ಎಂದರು.

ಜಿಲ್ಲೆಯ ಪ್ರವಾಸಿ ಸ್ಥಳಗಳನ್ನು ಇನ್ನಷ್ಟು ಆಕರ್ಷಣಿಯಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸ ಬೇಕಿದೆ. ಮಾಹಿತಿ ಫಲಕಗಳನ್ನು ಅಳವಡಿಸಬೇಕಿದೆ. ಕೆಲವು ಜಲಪಾತ ಪ್ರದೇಶಗಳಲ್ಲಿ ಸಂಭವಿಸುವ ಅವಘಡಗಳ ಬಗ್ಗೆ ಎಚ್ಚರಿಕೆ ಮಾಹಿತಿ ನೀಡಬೇಕಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಲಹೆ ಮಾಡಿದರು.

ಲೋಕೋಪಯೋಗಿ ಇಲಾಖೆ ನಿವೃತ್ತ ಕಾರ್ಯಪಾಲಕ ಅಭಿಯಂತರ ಎಸ್. ಸತ್ಯನಾರಾಯಣ ರಾವ್ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಪ್ರಮಾಣ ವಚನ ಬೋಧಿಸಿ ‘ಸುಸ್ಥಿರ ಪ್ರವಾಸೋದ್ಯಮ-ಅಭಿವೃದ್ಧಿ ಸಾಧನ’ ಎಂಬ ವಿಷಯ ಕುರಿತು ಮಾತನಾಡಿದರು.

ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ ಕೊಡಗು ಪ್ರವಾಸೋಧ್ಯಮ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕಿದೆ. ಕೊಡಗು ಉತ್ತಮ ಪ್ರವಾಸಿ ಕೇಂದ್ರ ಎಂಬ ಹೆಸರು ಪಡೆಯಲು ಶ್ರಮಿಸಬೇಕಿದೆ ಎಂದರು.

ಚೇಂಬರ್ ಆಫ್ ಕಾಮರ್ಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್. ಪ್ರಕಾಶ್, ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಚಂಗಪ್ಪ, ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಅವರು ಮಾತನಾಡಿದರು. ಹೋಂ ಸ್ಟೇ ನೋಂದಣಿ ಪ್ರಮಾಣ ಪತ್ರವನ್ನು ಇದೇ ಸಂದರ್ಭ ವಿತರಿಸಲಾಯಿತು.

ಬಿಸಿಎಂ ಇಲಾಖೆ ಅಧಿಕಾರಿ ಕೆ.ವಿ.ಸುರೇಶ್ ನಿರೂಪಿಸಿದರು, ರೇವತಿ ರಮೇಶ್ ಮತ್ತು ತಂಡದವರು ನಾಡಗೀತೆ ಹಾಡಿದರು, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಸಿ. ಜಗನ್ನಾಥ್ ಸ್ವಾಗತಿಸಿ, ವಂದಿಸಿದರು.