ಮಡಿಕೇರಿ, ಸೆ. 20: ಕಳೆದ 21 ವರ್ಷಗಳಿಂದ ಮಡಿಕೇರಿ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಾ, ಕಳೆದ ಬಾರಿ ತೃತೀಯ ಬಹುಮಾನ ಗಳಿಸುವದರೊಂದಿಗೆ ಮೊದಲ ಬಾರಿಗೆ ಸ್ಪರ್ಧಾಕಣದಲ್ಲಿ ಗುರುತಿಸಿಕೊಂಡ ಶ್ರೀ ಕರವಲೆ ಭಗವತಿ ಮಹಿಷ ಮರ್ದಿನಿ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿ 22ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿರುವದಾಗಿ ಸಮಿತಿಯ ಅಧ್ಯಕ್ಷ ಪಾಂಡಿರ ಸಜನ್ ಪೂಣಚ್ಚ ತಿಳಿಸಿದ್ದಾರೆ.
ಎರಡು ಟ್ರ್ಯಾಕ್ಟರ್‍ಗಳನ್ನು ಬಳಸಲಾಗುತ್ತಿದ್ದು, ದಿಂಡಿಗಲ್‍ನ ಜೇಮ್ಸ್ ಲೈಟಿಂಗ್ ಬೋರ್ಡ್‍ನ್ನು ಅಳವಡಿಸಲಿದ್ದಾರೆ. ಧ್ವನಿವರ್ಧಕ ಹಾಗೂ ಸ್ಟುಡಿಯೋ ವ್ಯವಸ್ಥೆಯನ್ನು ಬೆಂಗಳೂರಿನ ಸಂಗೀತಾ ಸ್ಟುಡಿಯೋ ಸಂಸ್ಥೆ ಮಾಡಲಿದೆ. ಪ್ಲಾಟ್ ಫಾರಂ ನಿರ್ಮಾಣ ಹಾಗೂ ಟ್ರ್ಯಾಕ್ಟರ್ ಸೆಟ್ಟಿಂಗ್ಸನ್ನು ಮಣಿ ಮತ್ತು ಚಂಗಪ್ಪ, ಗುರು ಪ್ರಸಾದ್ ತಂಡದವರು ಮಾಡಲಿದ್ದಾರೆ. ಒಟ್ಟು 17 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಮಡಿಕೇರಿಯ ಬ್ರಿಜೇಶ್, ಆನಂದ್ ಮತ್ತು ಸೋಮ ಕಲಾಕೃತಿಗಳನ್ನು ತಯಾರಿಸಲಿದ್ದಾರೆ. ಭಗವತಿ ಯುವ ಶಕ್ತಿ ಬಳಗ ಕಲಾಕೃತಿಗಳಿಗೆ ಚಲನ ವಲನ ನೀಡಲಿದೆ ಎಂದು ಸಜನ್ ಪೂಣಚ್ಚ ಮಾಹಿತಿಯಿತ್ತರು.
ಒಟ್ಟು 13 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರ ಲಾಗುತ್ತಿದ್ದು, ಜನಾಕರ್ಷಣೆ ಪಡೆಯುವದರ ಜೊತೆಗೆ ಬಹುಮಾನಕ್ಕೂ ಪೈಪೋಟಿ ನೀಡಲಾಗುವದು ಎಂದು ಸಜನ್ ಪೂಣಚ್ಚ ವಿವರಿಸಿದರು.
- ಉಜ್ವಲ್‍ರಂಜಿತ್