ಮಡಿಕೇರಿ, ಸೆ. 15: ನಗರದಲ್ಲಿರುವ ಯುವ ಭವನವನ್ನು ಜಿಲ್ಲಾ ಯುವ ಒಕ್ಕೂಟಕ್ಕೆ ಮುಂದಿನ ಮೂರು ತಿಂಗಳೊಳಗೆ ಬಿಟ್ಟು ಕೊಡದಿದ್ದಲ್ಲಿ ಯುವಭವನಕ್ಕೆ ಬೀಗ ಜಡಿಯಲು ಜಿಲ್ಲಾ ಯುವ ಒಕ್ಕೂಟದ ಮಾಸಿಕ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಮಂಡುವಂಡ ಬಿ. ಜೋಯಪ್ಪ ಹಾಗೂ ಕಾರ್ಯದರ್ಶಿ ಪಿ.ಪಿ. ಸುಕುಮಾರ್ ತಿಳಿಸಿದ್ದಾರೆ.

ಯುವಭವನ ಹಸ್ತಾಂತರಿಸು ವಂತೆ ಮತ್ತೊಮ್ಮೆ ಜಿಲ್ಲಾಧಿಕಾರಿ ಗಳನ್ನು ಮನವಿ ಮಾಡಿಕೊಂಡಿರುವ ಅವರು, ಬೀಗ ಜಡಿಯುವ ಎಚ್ಚರಿಕೆ ನೀಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಯುವಭವನದಲ್ಲಿ ಯಾವದೇ ಚಟುವಟಿಕೆಗಳನ್ನು ನಡೆಸಲು ಯುವ ಸಮೂಹಕ್ಕೆ ಸಾಧ್ಯವಾಗಿಲ್ಲ. ಯುವ ಚಟುವಟಿಕೆಗಳಿಗಾಗಿ ನಿರ್ಮಾಣ ಗೊಂಡಿರುವ ಏಕೈಕ ಭವನವನ್ನು ಯುವ ಒಕ್ಕೂಟಕ್ಕೆ ಹಸ್ತಾಂತರಿಸದೆ ಮೀನಾ ಮೇಷ ಎಣಿಸುತ್ತಿದ್ದ ಕಾರಣ ಒಕ್ಕೂಟ ಅನೇಕ ಬಾರಿ ಪ್ರತಿಭಟನೆ ನಡೆಸುವದು ಅನಿವಾರ್ಯ ವಾಯಿತು.

ಪ್ರತಿಭಟನೆಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಮಹಿಳಾ ಕಾಲೇಜಿನ ನೂತನ ಕಟ್ಟಡ ನಿರ್ಮಾಣಕ್ಕೆಂದು ಜಾಗ ಗುರುತಿಸುವಂತೆ ಕೆಲವು ತಿಂಗಳುಗಳ ಹಿಂದೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಈ ಪ್ರಕ್ರಿಯೆ ನಡೆದಿಲ್ಲ ಮತ್ತು ಯುವ ಒಕ್ಕೂಟಕ್ಕೆ ಯುವಭವನ ಹಸ್ತಾಂತರವಾಗುವ ಸಾಧ್ಯತೆಗಳು ಕ್ಷೀಣಿಸಿದೆ ಎಂದು ಬೇಸರ ವ್ಯಕ್ತಪಡಿಸಿರುವ ಬಿ. ಜೋಯಪ್ಪ ಹಾಗೂ ಪಿ.ಪಿ. ಸುಕುಮಾರ್, ಮೂರು ತಿಂಗಳೊಳಗೆ ಯುವಭವನ ಹಸ್ತಾಂತರ ವಾಗದಿದ್ದಲ್ಲಿ ಬೀಗ ಜಡಿದು ಪ್ರತಿಭಟನೆ ನಡೆಸಲು ಒಕ್ಕೂಟದ ಮಾಸಿಕ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.