ಮಡಿಕೇರಿ, ಸೆ. 15: ಕೊಡಗು ಜಿಲ್ಲೆಯ ಅರಣ್ಯದಂಚಿನ ಹಾಡಿಗಳು ಸೇರಿದಂತೆ ಬ್ಯಾಡಗೊಟ್ಟ ಹಾಗೂ ಬಸವನಹಳ್ಳಿಯಲ್ಲಿ ಪುನರ್ವಸತಿ ಕಂಡುಕೊಂಡಿರುವ ಗಿರಿಜನ ಕುಟುಂಬಗಳಿಗೆ ಪ್ರಸಕ್ತ ಮಳೆಗಾಲದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಲ್ಪಿಸಿದ ವಿಶೇಷ ನೆರವು ನುಂಗಿದವರು ಮಾನವರೇ ಅಲ್ಲ... ಇವರೆಲ್ಲ ದಾನವರು... ಎಂದು ಆದಿವಾಸಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಜಾರಿಗೊಂಡಿರುವ ಸರಕಾರದ ಈ ಯೋಜನೆಗಳ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಗಿರಿಜನ ಕುಟುಂಬಗಳು ಪ್ರಸಕ್ತ ದಿನಗಳಲ್ಲಿ ತಮಗೆ ಯಾವದೇ ಆಹಾರ ಪದಾರ್ಥಗಳು ದೊರಕುತ್ತಿಲ್ಲವೆಂದು ಬಹಿರಂಗಗೊಳಿಸಿದ್ದಾರೆ. ಇದುವರೆಗೆ ಬ್ಯಾಡಗೊಟ್ಟದಲ್ಲಿ ಪುನರ್ವಸತಿ ಕಲ್ಪಿಸಿರುವ 354 ಕುಟುಂಬಗಳು ಹಾಗೂ ಬಸವನಹಳ್ಳಿಯ 181 ಕುಟುಂಬಗಳ ಸಹಿತ ಜಿಲ್ಲೆಯ ಯಾವ ಗಿರಿಜನರಿಗೂ ಪೌಷ್ಟಿಕ ಆಹಾರ ಯೋಜನೆ ತಲುಪಿಲ್ಲವೆಂದು ‘ಶಕ್ತಿ’ಯೊಂದಿಗೆ ಆರೋಪಿಸಿದ್ದಾರೆ.

ನೀಡಬೇಕಿದ್ದೇನು...? : ಸರಕಾರಗಳ ಆದೇಶ ಪ್ರಕಾರ ಕೊಡಗು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ಗಿರಿಜನ ಕುಟುಂಬಗಳಿಗೆ ಮಳೆಗಾಲದಲ್ಲಿ ಕಿರು ಅರಣ್ಯ ಉತ್ಪನ್ನಗಳ ಸೇವನೆಯಿಂದ ಪೌಷ್ಟಿಕಾಂಶ ಕೊರತೆ ಎದುರಾಗದಂತೆ ಅಕ್ಕಿ, ತೊಗರಿ ಬೇಳೆ, ಹೆಸರು, ಹುರುಳಿ, ಅಲಸಂದೆ ಕಾಳುಗಳು, ಎಣ್ಣೆ, ಸಕ್ಕರೆ, ಬೆಲ್ಲ, ಮೊಟ್ಟೆ, ನಂದಿನಿ ತುಪ್ಪ ಇತ್ಯಾದಿ ಪ್ರತಿ ತಿಂಗಳೂ ನೀಡಬೇಕಿದ್ದರೂ, ಮಳೆಗಾಲದಲ್ಲಿ ಯಾವದೊಂದನ್ನು ನೀಡಿರುವದಿಲ್ಲವೆಂದು ಸೌಲಭ್ಯ ವಂಚಿತರು ಆಕ್ರೋಶ ಹೊರಗೆಡವಿದ್ದಾರೆ.

ಮಾಮೂಲಿ ರೇಷನ್ : ಪೌಷ್ಟಿಕ ಆಹಾರ ನೀಡಿಲ್ಲವಲ್ಲದೆ ಎಂದಿನಂತೆ ಗಿರಿಜನ ಕುಟುಂಬಗಳಿಗೆ ನೀಡಬೇಕಿರುವ ಪಡಿತರ ಪೂರೈಕೆಯಲ್ಲೂ ವಂಚಿಸಲಾಗಿದ್ದು, ಅಕ್ಕಿ, ಸಕ್ಕರೆ, ಎಣ್ಣೆ, ತೊಗರಿ, ಕಡ್ಲೆಕಾಳು, ಹುಣಸೆ, ಕಾಫಿ ಪುಡಿ, ಈರುಳ್ಳಿ, ಉಪ್ಪು, ಆಲೂಗಡ್ಡೆ, ಸಾಂಬಾರ ಪುಡಿ, ಮೆಣಸಿನ ಪುಡಿ, ತರಕಾರಿ, ಬಟ್ಟೆ ತೊಳೆಯಲು ಹಾಗೂ ಸ್ನಾನದ ಸೋಪು ಸಹಿತ ಪ್ರತಿ ವಾರವು ಗಿರಿಜನ ಪುನರ್ವಸತಿ ಕೇಂದ್ರಗಳಿಗೆ ನೀಡಬೇಕಿದ್ದು, ಈ ಬಾಬ್ತು ರೂ. 850 ಮೊತ್ತವನ್ನು ಕೂಡ ನಿಗದಿಗೊಳಿಸಲಾಗಿದೆ.

ಆದರೆ ಮಾಮೂಲಿ ಹಾಡಿಗಳಿಗೆ ಕಲ್ಪಿಸುತ್ತಿದ್ದ ಸೌಲಭ್ಯಗಳನ್ನು ಬ್ಯಾಡಗೊಟ್ಟ ಹಾಗೂ ಬಸವನಹಳ್ಳಿ ಪುನರ್ವಸತಿಗರಿಗೆ ಕಳೆದ ತಿಂಗಳಲ್ಲಿ ಅಲ್ಪಸ್ವಲ್ಪ ಪೂರೈಸಿದ್ದು, ಸೆಪ್ಟಂಬರ್ 10 ಕಳೆದಿದ್ದರೂ, ಈ ತಿಂಗಳಿನಲ್ಲಿ ಯಾರೊಬ್ಬರೂ ಹಾಡಿ ಜನರೆಡೆಗೆ ತಿರುಗಿಯೂ ನೋಡಿಲ್ಲವೆಂದು ಸೌಲಭ್ಯ ವಂಚಿತರ ಆರೋಪವಾಗಿದೆ.

ಗಂಗೆ ಹೇಳುವದೇನು ? ಬಸವನಹಳ್ಳಿ ಪುನರ್ವಸತಿ ಕೇಂದ್ರದಲ್ಲಿರುವ ಮೂರು ತಿಂಗಳ ಮಗುವಿನ ತಾಯಿ ಗಂಗೆಯ ಪ್ರಕಾರ ಗರ್ಭಿಣಿಯಾಗಿದ್ದ ದಿನಗಳಿಂದ ಪ್ರಸಕ್ತ ಮಗುವಿನ ತಾಯ್ತನದೊಂದಿಗೆ ಬಾಣಂತಿಯಾಗಿದ್ದರೂ, ಯಾವ ಪೌಷ್ಟಿಕ ಆಹಾರ ಪೂರೈಕೆಯಾಗಿಲ್ಲ. ಈ ತಿಂಗಳು ಅಕ್ಕಿ, ಬೇಳೆ, ತರಕಾರಿಯೂ ಸಿಕ್ಕಿಲ್ಲ.

(ಮೊದಲ ಪುಟದಿಂದ) ಪುನರ್ವಸತಿ ಕೇಂದ್ರ ಅಜ್ಜಿ ಸೀತಮ್ಮ ಹೇಳುವಂತೆ ಮಾಮೂಲಿ ಅಕ್ಕಿ, ಬೇಳೆ ಇತ್ಯಾದಿ ಕಳೆದ ತಿಂಗಳು ಲಭಿಸಿದರೂ, ಗಿರಿಜನರು ಯಾರೊಬ್ಬರೂ ಮೊಟ್ಟೆ, ತುಪ್ಪ ಇತ್ಯಾದಿ ಕಣ್ಣಿನಿಂದಲೂ ನೋಡಲು ಸಾಧ್ಯವಾಗಿಲ್ಲ. ಯಾವ.. ಮುಂ... ಮಕ್ಕಳು ತಿಂದರೋ ಗೊತ್ತಿಲ್ಲ ಅಲ್ಲಿನ ನಿವಾಸಿ ಸುಬ್ಬಿ ಎಂಬಾಕೆ ಪ್ರಕಾರ ತುಪ್ಪ, ಮೊಟ್ಟೆ ಇಲ್ಲ ಬಿಡಿ... ಸದ್ಯ ಈ ತಿಂಗಳು ತಿನ್ನಲು ಅಕ್ಕಿಯೂ ಸಿಗದೆ ಉಪವಾಸ ಮಲಗುವಂತಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.

ಮುಖಂಡರ ಹೇಳಿಕೆ : ದಿಡ್ಡಳ್ಳಿಯಿಂದ ಬಸವನಹಳ್ಳಿಗೆ ಬಂದಿರುವ 181 ಪುನರ್ವಸತಿ ಕುಟುಂಬಗಳ ಪ್ರಮುಖ ಸ್ವಾಮಿಯಪ್ಪ ಹಾಗೂ ಬ್ಯಾಡಗೊಟ್ಟ ಕೇಂದ್ರದ 354 ಕುಟುಂಬಗಳ ನಡುವೆ ಇರುವ ಮಲ್ಲ ಇವರಿಬ್ಬರ ಪ್ರಕಾರ ಮಳೆಗಾಲದಲ್ಲಿ ಮಾಮೂಲಿ ಅಕ್ಕಿ, ಕಾಳು ಇತ್ಯಾದಿ ಹೊರತು ಪೌಷ್ಟಿಕ ಆಹಾರದ ಪಟ್ಟಿಯಲ್ಲಿ ಸರಕಾರ ಕಲ್ಪಿಸಿರುವ ಯಾವ ಸೌಲಭ್ಯ ದೊರಕಿಲ್ಲವೆನ್ನುತ್ತಾರೆ.

ಅರ್ಜಿ ಸಲ್ಲಿಸಬೇಕಂತೆ : ಈ ತಿಂಗಳು ಯಾವದೇ ಆಹಾರ ಪದಾರ್ಥ ದೊರಕದಿರುವ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಲಾಗಿ, ನೂರಾರು ಅರ್ಜಿಯ ಪ್ರತಿಗಳನ್ನು ಕೊಟ್ಟಿದ್ದಾರಂತೆ, ಈ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸುವಂತೆ ಸೂಚಿಸಿದ್ದಾರಂತೆ, ಬಸವನಹಳ್ಳಿ, ಬ್ಯಾಡಗೊಟ್ಟ ಪುನರ್ವಸತಿ ಕುಟುಂಬದ ವಿವರ ಸಹಿತ ಈ ಅರ್ಜಿಗಳಲ್ಲಿ ಸಲ್ಲಿಸಿದರೆ ಮುಂದಿನ ದಿನಗಳಲ್ಲಿ ಪಡಿತರ ವಿತರಿಸಲಾ ಗುವದು ಎಂದು ತಿಳಿಸಿದ್ದಾಗಿ ಸ್ವಾಮಿಯಪ್ಪ ಪ್ರತಿಕ್ರಿಯಿಸಿದ್ದಾರೆ.

ಒಟ್ಟಿನಲ್ಲಿ ‘ದೇವರು ಕೊಟ್ಟರೂ ಪೂಜಾರಿ ಕೊಡ’ ಎಂಬ ಮಾತಿನಂತೆ ಅರಣ್ಯಗಳ ನಡುವೆ ಹಾಗೂ ಹಾಡಿಗಳಲ್ಲಿ ಕಡುಬಡತನದ ನಡುವೆ ನಿರಕ್ಷರ ಕುಕ್ಷಿಗಳಿಗೆ ಸರಕಾರದಿಂದ ಸೌಲಭ್ಯ ಕಲ್ಪಿಸಲಾಗಿದ್ದರೂ, ಇಲಾಖೆಯ ಮಂದಿ ಮತ್ತು ಮಧ್ಯವರ್ತಿಗಳು ನುಂಗುವz Àರೊಂದಿಗೆ ಮಾನವೀಯತೆ ಮರೆತು ದಾನವರಂತೆ ವಂಚಿಸುತ್ತಿರುವ ದುರಂತ. ಹಾಡಿ ಮಂದಿಯ ಹಸಿವಿನ ಕೂಗು ಜನಪ್ರತಿನಿಧಿಗಳ ಕಿವಿಗೂ ಮುಟ್ಟುವಂತಾಗಿ ಸೌಲಭ್ಯ ವಂಚಿತ ಗರ್ಭಿಣಿಯರು, ಬಾಣಂತಿ ಯರು, ವೃದ್ಧರು, ಎಳೆಯ ಕಂದಮ್ಮ ಗಳಿಗೆ ನ್ಯಾಯ ದೊರಕಬೇಕಷ್ಟೆ.