ಗೋಣಿಕೊಪ್ಪಲು, ಸೆ. 14: ಮಾಧ್ಯಮಗಳಿಂದ ಸಮಾಜಕ್ಕೆ ಸ್ಪಂದನೆ ಸಿಗುತ್ತಿದೆ ಎಂಬ ಕಾರಣಕ್ಕಾಗಿ ಕಾರ್ಯಾಂಗ ಮತ್ತು ನ್ಯಾಯಾಂಗಕ್ಕಿಂತಲೂ ಹೆಚ್ಚು ಮಾಧ್ಯಮ ಕ್ಷೇತ್ರ ಜನಪ್ರಿಯತೆ ಪಡೆದುಕೊಳ್ಳುತ್ತಿದೆ ಎಂದು ಕಾವೇರಿ ಎಜ್ಯುಕೇಷನ್ ಸೊಸೈಟಿ ನಿರ್ದೇಶಕ ಇಟ್ಟೀರ ಕೆ. ಬಿದ್ದಪ್ಪ ಅಭಿಪ್ರಾಯಪಟ್ಟರು
ಇಲ್ಲಿನ ಕಾವೇರಿ ಪದವಿಪೂರ್ವ ಕಾಲೇಜು ವತಿಯಿಂದ ನೂತನವಾಗಿ ಹೊರತಂದ ‘ಕಾವೇರಿ ದರ್ಶಿನಿ’ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಮಾಧ್ಯಮಗಳು ಸಮಾಜದ ದುರ್ಬಲ ಹಾಗೂ ಶೋಷಿತ ವರ್ಗದ ಬೆಂಬಲಕ್ಕೆ ನಿಂತಾಗ ಮಾತ್ರ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ವಿಷಯಗಳನ್ನು ಕ್ರಾಂತಿಕಾರಿಯಾಗಿ ಜನರಿಗೆ ತಲುಪಿಸುವ ಕಾರ್ಯದಲ್ಲಿ ಮಾಧ್ಯಮಗಳು ತೊಡಗಿಸಿಕೊಂಡಿವೆ. ಕಾರ್ಯಾಂಗ ಮತ್ತು ನ್ಯಾಯಾಂಗಕ್ಕಿಂತಲೂ ವೇಗವಾಗಿ ಜನರಿಗೆ ನ್ಯಾಯ ಸಿಗುವಂತಾಗಿದೆ. ಇದರಿಂದ ಮಾಧ್ಯಮಗಳನ್ನು ಜನರು ನೆಚ್ಚಿಕೊಳ್ಳುವಂತಾಗಿದೆ ಎಂದರು. ಪತ್ರಿಕೆ ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮವನ್ನು ವೃದ್ಧಿಸುವ ಹಾಗೂ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ವೇದಿಕೆಯಾಗಬೇಕು ಎಂದರು.
ಈ ಸಂದರ್ಭ ವಿದ್ಯಾರ್ಥಿಗಳಲ್ಲಿ ಮಾಧ್ಯಮದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ ಮಾಧ್ಯಮ ಸಂವಾದ ನಡೆಯಿತು. ಸಮಾಜದಲ್ಲಿ ಮಾಧ್ಯಮ ಜವಾಬ್ದಾರಿ, ಪತ್ರಿಕಾ ಸ್ವಾತಂತ್ರ್ಯ, ಸುದ್ಧಿಯಲ್ಲಿ ಸ್ಪಷ್ಟತೆ ಹಾಗೂ ಸುದ್ದಿಯ ವಿವಿಧ ದೃಷ್ಟಿಕೋನಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಂಡರು. ಉದ್ಯಮವಾಗಿ ಬೆಳೆಯುತ್ತಿರುವ ಮಾಧ್ಯಮವು ರಾಜಕೀಯ ವ್ಯಕ್ತಿಗಳ ಮುಖವಾಣಿಯಾಗುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದರು.
ಸಂವಾದದಲ್ಲಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕುಪ್ಪಂಡ ದತ್ತಾತ್ರಿ, ಗೋಣಿಕೊಪ್ಪ ಪ್ರೆಸ್ ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಕಾರ್ಯದರ್ಶಿ ಹೆಚ್.ಕೆ. ಜಗದೀಶ್, ಸದಸ್ಯ ಶ್ರೀನಿವಾಸ್ ಟಿ.ಎಲ್. ಹಾಗೂ ಪತ್ರಕರ್ತ ಲೋಹಿತ್ ಭೀಮಯ್ಯ ಪಾಲ್ಗೊಂಡಿದ್ದರು.
ಪ್ರಾಂಶುಪಾಲ ಸಣ್ಣುವಂಡ ರತನ್ ಮಾದಯ್ಯ, ವಿದ್ಯಾರ್ಥಿ ಸಲಹಾ ಸಮಿತಿ ಸದಸ್ಯೆ ಜೆಸಿಂತ, ಸಂಪಾದಕೀಯ ಮಂಡಳಿ ಸದಸ್ಯ ತಿರುಮಲಯ್ಯ ಎಸ್.ಆರ್. ಉಪಸ್ಥಿತರಿದ್ದರು. ಹೇಮಾ ಪ್ರಾರ್ಥಿಸಿದರು. ಎಂ.ಬಿ. ಪೂವಮ್ಮ ಸ್ವಾಗತಿಸಿದರು. ಕ್ಷೀರಾ ಮತ್ತು ವಿನೀಶಾ ನಿರೂಪಿಸಿದರು.